ರಾಜಕೀಯ ಬಿರುಗಾಳಿಗೆ ಕಾರಣವಾದ ರೋಹಿತ್ ಆತ್ಮಹತ್ಯೆ

ಹೈದ್ರಾಬಾದ್: ಇಲ್ಲಿನ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇದಕ್ಕೆ ಕುಮ್ಮಕ್ಕು ನೀಡಿರುವ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮತಿ ಇರಾನಿ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ.
ಹಲವು ಪಕ್ಷಗಳು ಎನ್‌ಡಿಎ ಮೇಲೆ ದಾಳಿಗೆ ಸಜ್ಜಾಗಿದ್ದು, ಇದು ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಈಗಾಗಲೇ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದು, ಬಿಎಸ್ಪಿ, ತೃಣಮೂಲ ಕಾಂಗ್ರೆಸ್, ಸಿಪಿಐ(ಎಂ) ಹಾಗೂ ಎನ್‌ಡಿಎ ಅಂಗಪಕ್ಷವಾದ ಎಲ್‌ಜೆಪಿ ಸತ್ಯಶೋಧನಾ ತಂಡವನ್ನು ಹೈದ್ರಾಬಾದ್‌ಗೆ ಕಳುಹಿಸಲು ನಿರ್ಧರಿಸಿವೆ.
26 ವರ್ಷ ವಯಸ್ಸಿನ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಾರಣಕ್ಕಾಗಿ ಈಗಾಗಲೇ ಬಂಡಾರು ದತ್ತಾತ್ರೇಯ, ಕುಲಪತಿ ಹಾಗೂ ವಿವಿ ಬಲಪಂಥೀಯ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಮಧ್ಯೆ ಹೈದ್ರಾಬಾದ್ ಘಟನೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಮುಖ್ಯಸ್ಥ ಪಿ.ಎಲ್.ಪುನಿಯಾ ಹೇಳಿದ್ದಾರೆ. ಪ್ರಕರಣದ ತನಿಖೆ ನಿಧಾನವಾಗಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷಿಪ್ರ ಹಾಗೂ ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.








