ಪ್ರತಿಭಾವಂತ ವೆಮುಲಾ ದಲಿತ ಕೋಟಾದಲ್ಲಿ ಪ್ರವೇಶ ಪಡೆದಿಲ್ಲ

ಹೈದರಾಬಾದ್; ದೇಶಾದ್ಯಂತ ಸಂಚಲನ ಮೂಡಿಸಿದ ದಲಿತ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಕ್ಯಾಂಪಸ್ ವಾತಾವರಣ ಪ್ರಕ್ಷುಬ್ಧವಾಗಿರುವ ನಡುವೆಯೇ, ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ವೆಮುಲಾ ಸಾಮಾನ್ಯ ವರ್ಗದಲ್ಲಿ ವಿವಿಗೆ ಪ್ರವೇಶ ಪಡೆದಿದ್ದ. ಮೀಸಲಾತಿ ಕೋಟಾದಲ್ಲಿ ಅಲ್ಲ ಎನ್ನುವ ಅಂಶ ಬಹಿರಂಗಾಗಿದೆ.
ವೆಮುಲಾ ದಲಿತ ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ವಿಶ್ವವಿದ್ಯಾನಿಲಯಕ್ಕೆ ನೀಡಿರಲಿಲ್ಲ. ಏಕೆಂದರೆ ಅದು ಅಗತ್ಯವಾಗಿರಲಿಲ್ಲ ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆತ ಸಾಮಾನ್ಯ ವರ್ಗದಲ್ಲೇ ಪ್ರವೇಶ ಪಡೆದಿದ್ದರಿಂದ ದಲಿತ ಎನ್ನುವುದಕ್ಕೆ ದಾಖಲೆಗಳನ್ನು ನೀಡುವುದು ಬೇಕಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅದಾಗ್ಯೂ ವಿದ್ಯಾರ್ಥಿಯ ಸಂಬಂಧಿಗಳು ನೀಡಿದ ಹೇಳಿಕೆ ಕೆಲ ಗೊಂದಲಗಳಿಗೆ ಕಾರಣವಾಗಿದೆ. ಮೃತ ವಿದ್ಯಾರ್ಥಿಯ ಅಂತ್ಯಕ್ರಿಯೆಗೆ ಮುನ್ನ ಆತನ ಮಾವ ನೀಡಿದ ಹೇಳಿಕೆಯಲ್ಲಿ, ವೆಮುಲಾನ ತಂದೆ ವಡ್ಡೇರಾ ಸಮುದಾಯಕ್ಕೆ ಸೇರಿದವರು ಎಂದು ತಿಳಿಸಿದ್ದಾರೆ.
ಈ ಸಮುದಾಯದ ಜನ ದೇಶಾದ್ಯಂತ ಕಲ್ಲು ಕೆತ್ತನೆ ಕೆಲಸ ಮಾಡುತ್ತಾರೆ. ಆಂಧ್ರಪ್ರದೇಶದಲ್ಲಿ ಈ ಸಮುದಾಯ ಹಿಂದುಳಿದ ವರ್ಗದಲ್ಲಿದೆ. ರೋಹಿತ್ ಆಂದ್ರಪ್ರದೇಶದ ಗುಂಟೂರು ಮೂಲದ ವಿದ್ಯಾರ್ಥಿ.
ಆದರೆ ಮಾವನ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ವೆಮುಲಾ ತಾಯಿ ತಾವು ಪರಿಶಿಷ್ಟ ವರ್ಗಕ್ಕೆ ಸೇರಿದವರು ಎಂದು ಹೇಳಿಕೆ ನೀಡಿದ್ದಾರೆ. ಆಕೆ ಆಘಾತದ ಸ್ಥಿತಿಯಲ್ಲಿದ್ದು, ಪರಿಶಿಷ್ಟರು ಎನ್ನುವುದಕ್ಕೆ ದಾಖಲೆ ನೀಡಿ ಎಂದು ಕೇಳುವ ಸ್ಥಿತಿಯಲ್ಲಿಲ್ಲ. ತಂದೆ ಮೊದಲೇ ಬಿಟ್ಟುಹೋಗಿದ್ದಾರೆ.
ಕಾನೂನಿನ ಅನ್ವಯ ಪರಿಶಿಷ್ಟ ತಾಯಿಯ ಮಗನನ್ನು ಪರಿಶಿಷ್ಟ ಎಂದೇ ಮೀಸಲಾತಿ ಸೌಲಭ್ಯಕ್ಕೆ ಪರಿಗಣಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ಕುಲಪತಿ ಅಪ್ಪಾರಾವ್ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆಯೇ ಎನ್ನುವುದನ್ನು ಪರಿಶೀಲಿಸಬೇಕಾಗಿದೆ ಎಂದು ಮೂಲಗಳು ಹೇಳಿವೆ.







