ಉಗ್ರರ ವಿರುದ್ಧ ಹೋರಾಟಕ್ಕೆ ಹಿಂದುತ್ವ ’ಉಗ್ರ’ ಸಂಘಟನೆ

ಮೀರಠ್: ಉಗ್ರರ ವಿರುದ್ಧದ ಹೋರಾಟ ಹೆಸರಿನಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಹಿಂದುತ್ವ ಸಂಘಟನೆಗಳಿಗೆ ಸಶಸ್ತ್ರ ತರಬೇತಿ ನೀಡುತ್ತಿರುವ ಆತಂಕಕಾರಿ ವಿಷಯ ಬಹಿರಂಗವಾಗಿದೆ. ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಹೋರಾಟಕ್ಕೆ ರಾಜಧಾನಿ ನವದೆಹಲಿಯ ಹೊರವಲಯದ ಗಡಿಭಾಗದಿಂದ ಸುಮಾರು 15 ಸಾವಿರ ಮಂದಿಯ "ಧರ್ಮಸೇನೆ" 2020ರ ವೇಳೆಗೆ ಅಸ್ತಿತ್ವಕ್ಕೆ ಬರಲಿದೆ ಎಂದು ಹಿಂದುತ್ವ ಸಂಘಟನೆಗಳು ಘೋಷಿಸಿವೆ.
ಇದಕ್ಕಾಗಿಯೇ ಹೊಸದಾಗಿ ಹಿಂದೂ ಸ್ವಾಭಿಮಾನ ಎಂಬ ವೇದಿಕೆ ಹುಟ್ಟಿಕೊಂಡಿದ್ದು, 15 ಸಾವಿರ ಮಂದಿಯನ್ನು ತರಬೇತಿಗೊಳಿಸಲಾಗುತ್ತಿದೆ. ಇವರೆಲ್ಲರೂ ತಮ್ಮ ನಂಬಿಕೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಬಲಿದಾನಕ್ಕೂ ಸಿದ್ಧ ಎಂದು ಮುಖಂಡರು ಘೋಷಿಸಿದ್ದಾರೆ.
ಕೋಮುಸೂಕ್ಷ್ಮ ಪ್ರದೇಶವಾದ ಈ ಭಾಗದಲ್ಲಿ ಪತ್ರಕರ್ತರ ತಂಡ ಪ್ರವಾಸ ಕೈಗೊಂಡು ಇಂಥ ನಾಲ್ಕು ತರಬೇತಿ ನೆಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ, ಇದರಲ್ಲಿ ಎಂಟು ವರ್ಷದ ಬಾಲಕರಿಂದ ಹಿಡಿದು ಎಲ್ಲ ವಯೋಮಾನದವರೂ ತರಬೇತಿ ಪಡೆಯುತ್ತಿರುವುದನ್ನು ತಂಡ ಗಮನಿಸಿದೆ. ಖಡ್ಗ, ಬಂದೂಕು ಹಾಗೂ ಇತರ ಶಸ್ತ್ರಾಸ್ತ್ರಗಳ ಬಳಕೆಯನ್ನೂ ಅವರಿಗೆ ಬೋಧಿಸಲಾಗುತ್ತಿದೆ. ಗಾಜಿಯಾಬಾದ್ ಜಿಲ್ಲೆಯ ದಾಸ್ನಾ ಎಂಬಲ್ಲಿನ ದೇವಸ್ಥಾನವೊಂದರಲ್ಲಿ ಇದರ ಕೇಂದ್ರ ಕಚೇರಿ ಇದ್ದು, ಇದರ ಮುಖಂಡರ ಹುದ್ದೆಗಳನ್ನು ಇಷ್ಟರಲ್ಲೇ ಘೋಷಿಸಲಾಗುವುದು ಎಂದು ಮುಖಂಡರು ಹೇಳಿಕೊಂಡಿದ್ದಾರೆ.
ಒಟ್ಟು 50 ಕೇಂದ್ರಗಳ ಪೈಕಿ ಕೆಲವು ಗುಪ್ತವಾಗಿ ಕಾರ್ಯನಿರ್ವಹಿಹಿಸುತ್ತಿದ್ದು, ಬಮೇತಾ ಹಾಗೂ ರೋರಿಯಂಥ ಕೇಂದ್ರಗಳಲ್ಲಿ ಪುರುಷರು ಮತ್ತು ಮಹಿಳೆಯರು, ಬಾಲಕ- ಬಾಲಕಿಯರಿಗೆ ಬಹಿರಂಗವಾಗಿಯೇ ಸಮರ ಶಿಕ್ಷಣ ಬೋಧಿಸಲಾಗುತ್ತಿದೆ. ಮೀರಠ್ ಪಟ್ಟಣದಲ್ಲಿ ಮೂರು ಹಾಗೂ ಮುಜಾಫರ್‌ನಗರ ಜಿಲ್ಲೆಯಲ್ಲಿ ಐದು ಇಂಥ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಎಂಟರಿಂದ 30 ವರ್ಷ ವರೆಗಿನ ಯುವಕ- ಯುವತಿಯರಿಗೆ ಈ ತರಬೇತಿ ನೀಡಲಾಗುತ್ತಿದೆ ಎಂದು ವಿಶ್ವಹಿಂದೂ ಪರಿಷತ್ ದುರ್ಗಾವಾಹಿನಿಯ ಮುಖ್ಯಸ್ಥೆ ಚೇತನಾ ಶರ್ಮಾ ವಿವರಿಸಿದರು. ಮಕ್ಕಳಿಗೆ ನೇರವಾಗಿ ಬಂದೂಕು ಹಾಗೂ ಖಡ್ಗ ನೀಡುವುದಿಲ್ಲ. ಆರು ತಿಂಗಳು ತರಬೇತಿ ನೀಡಿ ಮಾನಸಿಕವಾಗಿ ಅವರನ್ನು ಸಿದ್ಧಪಡಿಸುತ್ತೇವೆ. ಭಗವದ್ಗೀತೆ ಬೋಧಿಸುತ್ತೇವೆ ಎಂದು ಹೇಳಿದರು.
"ನಾನು ಯುದ್ಧಕಲೆ ಕಲಿಯಲು ಕಾರಣವೆಂದರೆ, ನನ್ನ ತಾಯಿ, ಅಕ್ಕಂದಿರಿಗೆ ಅಪಾಯವಿದೆ. ನಾನು ಅವರನ್ನು ರಕ್ಷಿಸಬೇಕು" ಎಂದು ಎಂಟು ವರ್ಷದ ಸೀಮಾ ಕುಮಾರಿ ಹೇಳುತ್ತಾರೆ.
ಭಾರತದ ಮೇಲೆ ನಡೆಯುತ್ತಿರುವ ಉಗ್ರರ ದಾಳಿಗಳು ಇಂಥ ವೇದಿಕೆ ಹುಟ್ಟಿಕೊಳ್ಳಲು ಅವಕಾಶ ಸೃಷ್ಟಿಸಿವೆ ಎಂದು ರೋರಿ ತರಬೇತಿ ಕೇಂದ್ರದ ಮುಖ್ಯಸ್ಥ ಹಾಗೂ ಮಾಜಿ ಯೋಧ ಪರ್ಮಿಂದರ್ ಆರ್ಯ ಹೇಳುತ್ತಾರೆ. "ನಮ್ಮ ತರಬೇತಿ ಸರಳವಾಗಿದೆ. ದೇಶದ ಮೇಲೆ ನಡೆಯುತ್ತಿರುವ ಉಗ್ರರ ದಾಳಿಯ ಬಗ್ಗೆ ನಾವು ಯುವಕರಿಗೆ ವಿವರಿಸುತ್ತೇವೆ" ಎಂದು ಅವರು ಸ್ಪಷ್ಟಪಡಿಸಿದರು.







