ಮನಮೋಹನ್ ವಿರುದ್ಧ ಮೋದಿ ವಾಗ್ದಾಳಿ

ಕೊಕ್ರಜಾರ್: ಅಸ್ಸಾಂ ಇಂದು ದಯನೀಯ ಸ್ಥಿತಿಯಲ್ಲಿರಲು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
"ಅಸ್ಸಾಂ ಮನಮೋಹನಸಿಂಗ್ ಅವರನ್ನು ಪದೇ ಪದೇ ರಾಜ್ಯಸಭೆಗೆ ಕಳುಹಿಸುತ್ತಿದೆ. ಈ ರಾಜ್ಯ ದೇಶಕ್ಕೆ 10 ವರ್ಷದ ಕಾಲ ಪ್ರಧಾನಿಯನ್ನು ನೀಡಿತು. ಆದರೂ ಸಮಸ್ಯೆಗಳ ಪಟ್ಟಿ ದೊಡ್ಡದಾಗಿದೆ. ಅಸ್ಸಾಂನಿಂದ ಆಯ್ಕೆಯಾದ ಪ್ರಧಾನಿ ಇದ್ದ ಕಾರಣ ಅಸ್ಸಾಂ ಎಲ್ಲ ಸಮಸ್ಯೆಗಳಿಂದ ಮುಕ್ತವಾಗಿರಬೇಕು ಎಂದು ನಾನು ನಂಬಿದ್ದೆ" ಎಂದು ಬಿಜೆಪಿ ಯುವ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ ತಿಳಿಸಿದರು.
ಗುವಾಹತಿಯಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮೋದಿ, ಆ ಪಕ್ಷ ಮಗ- ಮಗಳು ಪರಿಧಿಯಿಂದ ಹೊರನೋಡಲೇ ಇಲ್ಲ.
ಯುವ ಅಭಿವೃದ್ಧಿ ವಿಚಾರ ಬಂದಾಗ ಅದು ಮಗ ಹಾಗೂ ಮಗಳ ಅಭಿವೃದ್ಧಿಯನ್ನಷ್ಟೇ ನೋಡಿತು. ಆದರೆ ನಾನು ಯುವಜನಾಂಗದ ಬಗ್ಗೆ ನೋಡುವಾಗ ಕೋಟ್ಯಂತರ ಮಂದಿ ನನ್ನ ಮನಸ್ಸಿಗೆ ಬರುತ್ತದೆ ಎಂದು ಹೇಳಿಕೊಂಡರು.
ದೇಶದ ಜನಸಂಖ್ಯೆಯಲ್ಲಿ 35 ವರ್ಷಕ್ಕಿಂತ ಕೆಳಗಿನವರ ಸಂಖ್ಯೆ ಅತ್ಯಧಿಕವಾಗಿದ್ದು, ಅವರ ಅಭಿವೃದ್ಧಿಯನ್ನು ಯಾವ ಶಕ್ತಿಯೂ ತಡೆಯಲಾಗದು ಎಂದರು.







