ಶಿಕ್ಷಣ, ಸಂಸ್ಕಾರದಿಂದ ತನ್ನಿಂದ ತಾನೇ ಸಮಾಜಾಭಿವೃದ್ಧಿ: ಕೇಮಾರು ಶ್ರೀ

ಬೆಳ್ತಂಗಡಿ: ಸಮಾಜದ ಎಲ್ಲರಿಗೂ ಶಿಕ್ಷಣ ಹಾಗೂ ಸಂಸ್ಕಾರ ನೀಡಿದರೆ ಸಮಾಜ ತನ್ನಿಂದ ತಾನೇ ಅಭಿವೃದ್ಧಿಗೊಳ್ಳುತ್ತದೆ. ಬಾಲ್ಯದಿಂದಲೇ ಮಕ್ಕಳಿಗೆ ಕುಟುಂಬ ವ್ಯವಸ್ಥೆಯ ಮೂಲಕ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಬೇಕು. ಹಾಗಾದಲ್ಲಿ ಸಮಾಜದೊಂದಿಗೆ ಈ ದೇಶದ ಅಭಿವೃದ್ಧಿಯೂ ಆಗುತ್ತದೆ ಎಂದು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.
ಉಜಿರೆಯ ಶ್ರೀ ಗಣೇಶ ಕೃಪಾ ಕಲ್ಯಾಣ ಮಂಟಪದಲ್ಲಿ ಜರುಗಿದ ಮಲೆಕುಡಿಯರ ಯುವ ವೇದಿಕೆಯನ್ನು ಉದ್ಘಾಟಿಸಿ, ಆಶೀರ್ವಚನವನ್ನು ನೀಡಿದರು.
ಗುರು-ಹಿರಿಯರು ತೋರಿಸಿದಂತಹ ಜೀವನದ ದಾರಿಯಲ್ಲಿ ನಡೆಯಿರಿ. ಹಿರಿಯರಿಗೆ ಗೌರವವನ್ನು ತೋರಬೇಕು. ಅವರಲ್ಲಿ ಸಾಕಷ್ಟು ಜೀವನಾನುಭವಿರುತ್ತದೆ. ಮಕ್ಕಳಿಗೆ ಮೊದಲು ಸಂಸ್ಕಾರವನ್ನು ಕಲಿಸಿ. ಸಮಾಜ ಅಭಿವೃದ್ಧಿಯಾಗಬೇಕಾದರೆ ಮೊದಲು ಕುಟುಂಬ ವ್ಯವಸ್ಥೆ ಸರಿಯಾಗಬೇಕು ಎಂದರು. ಅಸಹಾಯಕ, ನೊಂದವರ, ಬಡವರಿಗೆ ಯಾವತ್ತೂ ನನ್ನ ಸಹಾಯ, ಬೆಂಬಲ ಇದ್ದೇ ಇರುತ್ತದೆ. ಮಲೆಕುಡಿಯ ಜನಾಂಗ ಇನ್ನಷ್ಟು ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆನ್ನು ವಹಿಸಿದ್ದ, ಯುವ ಮಲೆಕುಯ ವೇದಿಕೆಯ ಅಧ್ಯಕ್ಷೆ ವಸಂತಿ ಭೈರಕಟ್ಟ ಮಾತನಾಡಿ ಮಲೆಕುಡಿಯ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಮಾಡಲು ಈ ವೇದಿಕೆಯನ್ನು ಹುಟ್ಟುಹಾಕಲಾಗಿದೆ. ಫೇಸ್‌ಬುಕ್ ಹಾಗೂ ವ್ಯಾಟ್ಸಾಪ್ ಮುಂತಾದ ಸಾಮಾಜಿಕ ತಾಣದ ಸಹಾಯದಿಂದ ಈ ಮಲೆಕುಡಿಯರ ವೇದಿಕೆಯನ್ನು ಹುಟ್ಟು ಹಾಕಲು ಸಾಧ್ಯವಾಯಿತು ಎಂದರು. ಸೇವಾ, ಸುರಕ್ಷಾ, ಸಂಸ್ಕಾರ ತತ್ವದಡಿಯಲ್ಲಿ ಕಾರ್ಯನಿರ್ವಹಿಸಲಿರುವ ವೇದಿಕೆಯು ಮಲೆಕುಡಿಯ ಜನಾಂದ ಅಭಿವೃದ್ಧಿಗೆ ಪೂರಕವಾಗಿ ಕೆಲಸಗಳನ್ನು ಮಾಡಲಿದೆ ಎಂದು ತಿಳಿಸಿದರು.
ಬೆಳ್ತಂಗಡಿ ಸಮಾಜಕಲ್ಯಾಣ ಇಲಾಖೆಯ ಪ್ರಭಾರ ವಿಸ್ತರಣಾಧಿಕಾರಿ ಹೇಮಲತಾ ಅವರು ಮಲೆಕುಡಿಯ ಜನಾಂಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕು. ಪವಿತ್ರ ಹಾಗೂ ಜೀವರಕ್ಷಣೆ ಮಾಡಿದಂತಹ ಶಿಶಿಲದ ಶ್ರೀಮತಿ ಲಲಿತಾ ಇವರನ್ನು ಸನ್ಮಾನಿಸಲಾಯಿತು. ಹೆಬ್ರಿ ಕಬ್ಬಿನಾಲೆಯ ಪೋಲಿಯೋ ಪೀಡಿತರಾದ ಲಕ್ಷ್ಮಣ ಮಲೆಕುಡಿಯ ಹಾಗೂ ಅನಾರೋಗ್ಯ ಪೀಡಿತರಾಗಿರುವ ಕಿಟ್ಟಣ್ಣ ಮಲೆಕುಡಿಯ ಅವರಿಗೆ ಸಹಾಯಧನವನ್ನು ನೀಡಲಾಯಿತು.
ಸಮಾರಂಭದಲ್ಲಿ, ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಉಳಿರ್ ಸುಂದರ ಗೌಡ, ಚಿಕ್ಕಮಗಳೂರು ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಗೋಪಾಲ ಮಲೆಕುಡಿಯ, ಕಾಸರಗೋಡು ಜಿಲ್ಲಾ ಅಖಿಲ ಕೇರಳ ಮಲೆಕುಡಿಯರ ಸಂಘದ ಅಧ್ಯಕ್ಷರಾದ ಶೇಷಗೌಡಸಾಮಾಜಿಕ ಹೋರಾಟಗಾರ ಹಾಗೂ ಮಲೆಕುಡಿಯ ಸಂಘದ ಮಾಜಿ ಅಧ್ಯಕ್ಷ ಎಲ್ಯಣ್ಣ ಮಲಕುಡಿಯ, ಬೆಳ್ತಂಗಡಿ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಲಲಿತಾ, ಮಲೆಕುಡಿಯರ ಯುವ ವೇದಿಕೆಯ ಕಾನೂನು ಸಲಹೆಗಾರ ಹಾಗೂ ವಕೀಲ ವೆಂಕಟೇಶ್ ಬೆಂಗಳೂರು, ಲೆಕ್ಕ ಪರಿಶೋಧಕ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮ್ಯಾನೇಜರ್ ಪಮೇಶ್ವರ ಮಲೆಕುಡಿಯ, ಜಿ.ಪಂ ಮಾಜಿ ಸದಸ್ಯ ನಾರಾಯಣ ಶಿಶಿಲ, ಉಡುಪಿಯ ವನವಾಸಿ ಕಲ್ಯಾಣದ ಪ್ರಮುಖ ಮೋನಪ್ಪ ಮಾನಡು, ಯುವವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಣೇಶ್ ಎಂ. ಈ ಸ್ವಾಗತಿಸಿ, ಯುವವೇದಿಕೆಯ ಉಪಾಧ್ಯಕ್ಷ ಆನಂದ ಕಲ್ಗೋಡ್ ಧನ್ಯವಾದ ಸಮರ್ಪಿಸಿ, ಉಮೇಶ್ ನಾರಾವಿ ಕಾರ್ಯಕ್ರಮ ನಿರೂಪಿಸಿದರು.







