ಕದ್ರಿ ಪಾರ್ಕ್‌ನಲ್ಲಿ ಶೀಘ್ರವೇ ಪುಟಾಣಿ ರೈಲು ಸಂಚಾರ: ಶ್ರೀವಿದ್ಯಾ
ಮಂಗಳೂರು: ಕದ್ರಿ ಪಾರ್ಕ್‌ನಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಪುಟಾಣಿ ರೈಲು ನಾದುರಸ್ತಿಯಲ್ಲಿದ್ದ ಕಾರಣ ಹೊಸ ರೈಲಿನ ಉತ್ಪಾದನಾ ಪ್ರಕ್ರಿಯೆ ಮೈಸೂರಿನಲ್ಲಿ ರೈಲ್ವೇ ಇಲಾಖೆಯಿಂದ ನಡೆಯುತ್ತಿದೆ. ಮಾರ್ಚ್‌ನೊಳಗೆ ಕದ್ರಿ ಪಾರ್ಕ್‌ನಲ್ಲಿ ಪುಟಾಣಿ ರೈಲು ಕಾರ್ಯಾಚರಿಸುವ ಸಾಧ್ಯತೆ ಇದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಕಾರಿ ಶ್ರೀವಿದ್ಯಾ ಹೇಳಿದ್ದಾರೆ.
ನಗರದ ಕದ್ರಿ ಉದ್ಯಾನವನದಲ್ಲಿ ಇಂದು ಫಲಪುಷ್ಪ ಪ್ರದರ್ಶನದ ಸಿದ್ಧತೆಗಳ ಕುರಿತಂತೆ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
40 ಲಕ್ಷ ರೂ. ವೆಚ್ಚದಲ್ಲಿ ಕದ್ರಿ ಉದ್ಯಾನವನದಲ್ಲಿ ಹೊಸ ಪುಟಾಣಿ ರೈಲು ಬರಲಿದ್ದು, ಈಗಿರುವ ಹಳಿಯನ್ನು ರಿಪೇರಿ ಕಾರ್ಯವೂ ಇದರಲ್ಲಿ ಸೇರಿದೆ ಎಂದವರು ಹೇಳಿದರು.
ಪಾರ್ಕ್‌ನಲ್ಲಿ ಸೋಲಾರ್ ಬೆಳಕು
ಕದ್ರಿ ಉದ್ಯಾನವದಲ್ಲಿ ವರ್ಷಪೂರ್ತಿ ಬೆಳಕಿನ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ ಸೋಲಾರ್ ವ್ಯವಸ್ಥೆಗೆ ಕಾರ್ಯ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಕರ್ನಾಟಕ ಬ್ಯಾಂಕ್ 10 ಲಕ್ಷ ರೂ., ಸಿಂಡಿಕೇಟ್ ಬ್ಯಾಂಕ್ 5 ಲಕ್ಷ ರೂ. ದೇಣಿಗೆ ನೀಡಲು ಮುಂದಾಗಿದೆ.
ಈ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಇದರ ಜತೆಯಲ್ಲೇ ಕದ್ರಿ ಪಾರ್ಕ್‌ನಲ್ಲಿ ವಿಜಯಾ ಬ್ಯಾಂಕ್‌ನ ಕೊಡುಗೆಯಲ್ಲಿ 5ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್‌ನ ಒಳಗಡೆ ತಿರುಗಾಡುವವರಿಗೆ ಮಳೆ ಬಿಸಿಲಿನಿಂದ ಆಶ್ರಯ ಕಲ್ಪಿಸುವ ವ್ಯವಸ್ಥಿತ ತಂಗುದಾಣ ನಿರ್ಮಿಸಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು.







