ಸಚಿವ ಸದಾನಂದಗೌಡರ ನಾದಿನಿಯ ಪುತ್ರ ಮತ್ತಾತನ ಸ್ನೇಹಿತನಿಂದ ಬಾರ್‌ನಲ್ಲಿ ದಾಂಧಲೆ
ಬೆಂಗಳೂರು; ಅವಧಿ ಮೀರಿದ ಹಿನ್ನೆಲೆಯಲ್ಲಿ ಮದ್ಯ ಸರಬರಾಜು ಮಾಡಲು ನಿರಾಕರಿಸಿದ ಜೆಪಿ ನಗರದ ಸ್ಪೋರ್ಟ್ಸ್ ಬಾರ್‌ನಲ್ಲಿ ಕೇಂದ್ರ ಸಚಿವ ಸದಾನಂದಗೌಡರ ನಾದಿನಿಯ ಪುತ್ರ ಮತ್ತಾತನ ಸ್ನೇಹಿತ ಬೌನ್ಸರ್‌ಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ದಾಂಧಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜ.2ರಂದು ತಡರಾತ್ರಿ ಜೆಪಿನಗರದಲ್ಲಿನ ಅಂಡರ್‌ಡಾಗ್ ಸ್ಪೋರ್ಟ್ಸ್ ಬಾರ್‌ಗೆ ಬಂದಿದ್ದ ಸದಾನಂದಗೌಡರ ಪತ್ನಿ ದಾಟಿ ಅವರ ತಂಗಿ ಪ್ರೇಮ ಅವರ ಪುತ್ರ ಅಭಿಷೇಕ್.ಎಂ.ಆರ್ ಮತ್ತು ಆತನ ಸ್ನೇಹಿತ ಹಿತೇಶ್ ಮದ್ಯ ಸರಬರಾಜು ಮಾಡಿ ಊಟ ನೀಡುವಂತೆ ಕೇಳಿದ್ದಾರೆ, ಬಾರ್ ಸಮಯ ಮುಗಿದ ಹಿನ್ನೆಲೆಯಲ್ಲಿ ಮುಚ್ಚುವುದಾಗಿ ಬೌನ್ಸರ್‌ಗಳು ತಿಳಿಸಿದ್ದಾರೆ. ಆದರೂ ಮದ್ಯ ಊಟ ಸರಬರಾಜು ಮಾಡುವಂತೆ ಪಟ್ಟು ಹಿಡಿದಿದ್ದರಿಂದ ಬಾಗಿಲು ಮುಚ್ಚಲು ಹೊರಟ ಬೌನ್ಸರ್‌ಗಳ ಜೊತೆ ಜಗಳಕ್ಕೆ ನಿಂತ ಅಭಿಷೇಕ್ ಅವಾಚ್ಯ ಶಬ್ದಗಳಿಂದ ನಿಂದಿಸಿದಾಗ ಬೌನ್ಸರ್‌ಗಳು ಬಾರ್‌ನಿಂದ ಹೊರಗೆ ಹೋಗುವಂತೆ ಸೂಚಿಸಿದ್ದಾರೆ.
ಈ ವೇಳೆ ಬೌನ್ಸರ್‌ಗಳು ಮತ್ತು ಅಭಿಷೇಕ್ ಮಧ್ಯೆ ಮಾತಿಗೆ ಮಾತು ಬೆಳೆದು, ಸಿಟ್ಟಿಗೆದ್ದ ಅಭಿಷೇಕ್ ಬೌನ್ಸರ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಅಭಿಷೇಕ್ ಮತ್ತು ಆತನ ಸ್ನೇಹಿತನನ್ನು ಹೊರಗೆ ತಳ್ಳುವ ಪ್ರಯತ್ನವನ್ನು ಬಾರ್‌ನಲ್ಲಿನ ಬೌನ್ಸರ್‌ಗಳು ಮಾಡಿದ್ದಾರೆ.ಈ ಎಲ್ಲ ದೃಶ್ಯಗಳೂ ಬಾರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿವೆ.
ಘಟನೆಗೆ ಸಂಬಂಧಿಸಿ ಅಭಿಷೇಕ್ ಮತ್ತು ಬಾರ್ ಮ್ಯಾನೇಜರ್ ಎರಡೂ ಕಡೆಯವರು ನೀಡಿರುವ ದೂರು ದಾಖಲಿಸಿರುವ ಜೆಪಿನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಲೋಕೇಶ್‌ಕುಮಾರ್ ತಿಳಿಸಿದ್ದಾರೆ.







