ರಾಜಸ್ಥಾನ: ಶಿಕ್ಷಣದಲ್ಲಿ ಕೇಸರಿಕರಣ; ಕಾಂಗ್ರೆಸ್ ಸರಕಾರದ ಪಠ್ಯಪುಸ್ತಕಗಳು ಗುಜಿರಿಗೆ !

ಹೊಸದಿಲ್ಲಿ, ಜ.21: ರಾಜಸ್ತಾನ ಸರಕಾರವು ಒಂದರಿಂದ ಎಂಟನೆ ತರಗತಿ ತನಕ ಈಗಿರುವ ಪಠ್ಯಪುಸ್ತಕಗಳನ್ನು ಬದಲಾಯಿಸಿ 37 ಕೋಟಿ ರೂ. ವೆಚ್ಚದಲ್ಲಿ ಹೊಸ ಪಠ್ಯಪುಸ್ತಕಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಪುಸ್ತಕಗಳಲ್ಲಿ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ಮಹಾರಾಜ ಸೂರಜ್‌ಮಾಲ್, ಹೆಮು ಕಲಾನಿ ಮತ್ತು ಗೋವಿಂದ ಗುರು , ಮಹಾರಾಣಾ ಪ್ರತಾಪ್ ಅವರಂತಹ ರಾಜರುಗಳ ಆಳ್ವಿಕೆಯ ವೈಭವಿಕರಣಗೊಳಿಸುವ ಚಿಂತನೆ ನಡೆಸಲಾಗಿದೆ.
ಇದೇ ವೇಳೆ ಮೊಘಲ್ ದೊರೆ ಅಕ್ಬರ್ ಅವರಂತಹ ರಾಜರುಗಳು " ದಾಳಿಕೋರರು " ಎಂದು ಬಿಂಬಿಸಿ ಅವರ ಮಹಾನತೆಯನ್ನು ಪ್ರಶ್ನಿಸುವ ಪ್ರಯತ್ನವನ್ನು ಪಠ್ಯಪುಸ್ತಕದಲ್ಲಿ ಮಾಡಲಾಗುತ್ತಿದೆ. 2016-17ನೆ ಸಾಲಿಗೆ ಹಿರಿಯ ಪ್ರಾಥಮಿಕ ಶಾಲೆಗಳ 36ಹೊಸ ಪಠ್ಯಪುಸ್ತಕಗಳು ಅಳವಡಿಕೆಯಾಗಲಿದೆ ಎಂದು ತಿಳಿದು ಬಂದಿದೆ.
ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಹೊಸ ಪಠ್ಯಪುಸ್ತಕಗಳನ್ನು ಜಾರಿಗೆ ತರಲಾಗಿತ್ತು. ಇದೀಗ ಆಗಿನ ಪಠ್ಯಕ್ರಮವನ್ನು ಬದಲಾಯಿಸಿ ಸರಕಾರ ಶಿಕ್ಷಣದಲ್ಲಿ ಕೇಸರಿಕರಣಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಹೊಸ ವಿವಾದ ಸೃಷ್ಟಿಯಾಗಿದೆ.





