ಬೆಂಗಳೂರು : ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಸರ್ಕಾರದ ನಿರ್ಧಾರವಲ್ಲ : ಸಿದ್ದರಾಮಯ್ಯ

ಬೆಂಗಳೂರು,ಜ.20: ದ್ವಿ-ಚಕ್ರ ವಾಹನದಹಿಂಬದಿ ಸವಾರರೂ ಕಡ್ಡಾಯವಾಗಿ ಶಿರಸ್ತ್ರಾಣ ಧರಿಸಬೇಕೆಂಬುದು ಸರ್ಕಾರದ ನಿರ್ಧಾರವಲ್ಲ. ಭಾರತ ಸರ್ವೋಚ್ಛ ನ್ಯಾಯಾಲಯದ ಸೂಚನೆಯ ಪಾಲನೆಯಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ದ್ವಿ-ಚಕ್ರ ವಾಹನಗಳ ಸವಾರರ ಜೊತೆಯಲ್ಲಿ ಪ್ರಯಾಣಿಸುವ ಹಿಂಬದಿ ಸವಾರರಿಗೂ ಶಿರಸ್ತ್ರಾಣ ಧರಿಸುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳು, ಆರೋಪಗಳು ಹಾಗೂ ಟೀಕೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಮೇಲುಸ್ತರದ ಬುದ್ಧಿವಂತ ವರ್ಗ ಎಂದು ಭಾವಿಸಿದ್ದೆ. ಆದರೆ, ಸಾಮಾಜಿಕ ಜಾಲ ತಾಣದಲ್ಲಿ ಶಿರಸ್ತ್ರಾಣ ತಯಾರಕರು, ವಿತರಕರು ಹಾಗೂ ಮಾರಾಟಗಾರರಿಗೆ ಲಾಭ ಮಾಡಿ ಕೊಡಲು ಈ ನಿಯಮ ಜಾರಿಗೆ ತರಲಾಗಿದೆ ಎಂಬ ಆರೋಪವು ನನ್ನಲ್ಲಿ ಅಚ್ಚರಿಯ ಜೊತೆಗೆ ದುಃಖವನ್ನೂ ದುಪ್ಪಟ್ಟುಗೊಳಿಸಿತು.
ವಿಶ್ವಾದ್ಯಂತ ಯುದ್ಧಗಳಲ್ಲಿ ಬಲಿಯಾಗುವವರ ಸಂಖ್ಯೆಗಿಂತಲೂ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳುತ್ತಾರೆ. ರಾಜ್ಯದಲ್ಲಿ ರಸ್ತೆ ಅಪಘಾತಗಳಲ್ಲಿ ಪ್ರಾಣತೆತ್ತವರಲ್ಲಿ ಶೇಕಡಾ 30 ರಷ್ಟು ಮಂದಿ ದ್ವಿ-ಚಕ್ರ ವಾಹನಗಳ ಸವಾರರು ಹಾಗೂ ಹಿಂಬದಿ ಸವಾರರೇ ಆಗಿದ್ದಾರೆ ಎಂಬುದು ಕಟು ಸತ್ಯ ಮಾತ್ರವಲ್ಲ, ಕಠೋರ ಸತ್ಯ ಕೂಡಾ. ಈ ಎಲ್ಲಾ ಅಂಕಿ-ಅಂಶಗಳನ್ನೂ ವೈಜ್ಞಾನಿಕವಾಗಿ ಅಧ್ಯಯಿನಿಸಿರುವ ಹಲವು ವರದಿಗಳನ್ನು ಪರಿಗಣಿಸಿರುವ ಭಾರತ ಸರ್ವೋಚ್ಛ ನ್ಯಾಯಾಲಯವು ಜನತೆಯ ಹಿತದೃಷ್ಠಿಯಿಂದ ದ್ವಿ-ಚಕ್ರ ವಾಹನಗಳ ಸವಾರರ ಜೊತೆಗೆ ಹಿಂಬದಿ ಸವಾರರಿಗೂ ಶಿರಸ್ತ್ರಾಣವನ್ನು ಕಡ್ಡಾಯಗೊಳಿಸಿದೆ. ಅಲ್ಲದೆ, ನ್ಯಾಯಾಲಯದ ಸೂಚನೆಯ ಅನುಷ್ಠಾನಕ್ಕೆ ತನ್ನ ಉಸ್ತುವಾರಿಯಲ್ಲೇ 2014 ರ ಮೇ 30 ರಂದು ರಸ್ತೆ ಸುರಕ್ಷತಾ ಸಮಿತಿಯನ್ನು ರಚಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮೋಟಾರು ವಾಹನ ಕಾಯಿದೆ 1988 ರ ಪರಿಚ್ಛೇಧ 129 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರ ನಿಯಮ 230 ರಂತೆ ದ್ವಿ-ಚಕ್ರ ವಾಹನಗಳ ಸವಾರರು ಹಾಗೂ ಹಿಂಬದಿ ಸವಾರರು ಶಿರಸ್ತ್ರಾಣ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಇದರ ಸಂಪೂರ್ಣ ಅನುಷ್ಠಾನ ರಾಜ್ಯ ಸರ್ಕಾರದ್ದಾಗಿದೆ. ಈ ನಿಯಮವನ್ನು ಪಾಲಿಸದಿದ್ದಲ್ಲಿ ನ್ಯಾಯಾಲಯದ ನಿಂದನೆಯಾಗುತ್ತದೆ. ಆದಕಾರಣ, ತಮ್ಮ ಸ್ವಂತ ದೃಷ್ಠಿಯಿಂದ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ದ್ವಿ-ಚಕ್ರ ವಾಹನಗಳ ಸವಾರರು ಹಾಗೂ ಹಿಂಬದಿ ಸವಾರರು ಶಿರಸ್ತ್ರಾಣ ಧರಿಸುವುದು ಸೂಕ್ತ ಎಂಬುದು ಸರ್ವೋಚ್ಚ ನ್ಯಾಯಾಲಯದ ಸದುದ್ದೇಶವಾಗಿದೆ. ಈ ವಿಷಯವನ್ನು ಮನಗಂಡು ರಾಜ್ಯಾದ್ಯಂತ ದ್ವಿ-ಚಕ್ರ ವಾಹನಗಳ ಸವಾರರು ಹಾಗೂ ಹಿಂಬದಿ ಸವಾರರು ಶಿರಸ್ತ್ರಾಣವನ್ನು ಧರಿಸಬೇಕೆಂಬುದು ನಮ್ಮ ಸರ್ಕಾರದ ಹಾಗೂ ನನ್ನ ವೈಯುಕ್ತಿಕ ಮನವಿಯಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಇಂದಿನಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಗೆ ಬಂದಿದೆ. ಹೆಲ್ಮೆಟ್ ಧರಿಸದೇ ಪ್ರಯಾಣಿಸಿದರೆ ಮೊದಲ ಬಾರಿ 100 ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡು ಮತ್ತು ಮೂರನೇ ಬಾರಿ ತಪ್ಪೆಸಗಿದರೆ ಕ್ರಮವಾಗಿ 200 ರೂಪಾಯಿ ಮತ್ತು 300 ರೂಪಾಯಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಒಂದು ವೇಳೆ ನಾಲ್ಕನೇ ಬಾರಿಯೂ ತಪ್ಪೆಸಗಿದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಬೆಂಗಳೂರು ನಗರದ ಅನೇಕ ಕಡೆಗಳಲ್ಲಿ ಇಂದು ಸಂಚಾರಿ ಪೊಲೀಸರು ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಹಿಂಬದಿ ಸವಾರರನ್ನು ತಡೆದು ದಂಡ ವಿಧಿಸಿದ್ದು ಕಂಡುಬಂದಿತು. ಜತೆಗೆ ದ್ವಿಚಕ್ರ ವಾಹನ ಸವಾರರಲ್ಲಿ ಹೆಲ್ಮೆಟ್ ಕಡ್ಡಾಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.







