ಕಾರ್ಕಳ : ಸತ್ಕಾರ್ಯದಿಂದ ಭಗವಂತನನ್ನು ಒಲಿಸಿಕೊಳ್ಳಬೇಕು-ಗುರುಪುರ ಶ್ರೀ

ಕಾರ್ಕಳ : ಭಗವಂತನಿಗೆ ನಮ್ಮ ಭಕ್ತಿ ಪ್ರಿಯವಾದುದು. ಭಕ್ತಿಯಿಲ್ಲದೆ ಭಗವಂತನ ಆರಾಧನೆ ವ್ಯರ್ಥ. ಆದ್ದರಿಂದ ಶ್ರೇಷ್ಟ ಮಾನವ ಜನ್ಮವನ್ನು ಹಾಳು ಮಾಡದೇ ಜೀವನದಲ್ಲಿ ಸತ್ಕಾರ್ಯ ಮಾಡಿ ಭಗವಂತನನ್ನು ಒಲಿಸಿಕೊಳ್ಳಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಅವರು ಪತ್ತೊಂಜಿಕಟ್ಟೆ ಮೂಕಾಂಬಿಕಾ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಧರ್ಮ ಶಿಕ್ಷಣ ಮಾಯವಾಗುತ್ತಿದೆ. ಆಂಗ್ಲಭಾಷೆಯತ್ತ ನಮ್ಮ ಒಲವು ಹೆಚ್ಚಿದೆ. ಅರ್ಥವಿಲ್ಲದ ಶಬ್ಧಗಳನ್ನು ಮಕ್ಕಳಿಗೆ ಬೋಧಿಸಿ ಮಕ್ಕಳ ನಾಲಿಗೆ, ಬದುಕನ್ನು ತಿರುಗದಂತೆ ಮಾಡಿದ್ದೇವೆ. ಇದರಿಂದ ಧರ್ಮ ವ್ಯವಸ್ಥೆ ಹಾಳಾಗಿದೆ ಎಂದರು. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಸದಸ್ಯರಾದ ಸೀತಾರಾಮ, ಸುಭಿತ್ ಎನ್. ಆರ್., ಕುಕ್ಕುಂದೂರು ಗ್ರಾ.ಪಂ.ಸದಸ್ಯ ರಾಜೇಶ್ ರಾವ್ ಪರಪು, ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ದಿವಾಕರ ಶೆಟ್ಟಿ, ಸೇವಾ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಅಂಚನ್, ಅಧ್ಯಕ್ಷ ವಿ ನಯ ಕುಮಾರ್ ಶೆಟ್ಟಿ, ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಜಯಂತಿ, ಅಧ್ಯಕ್ಷೆ ಸಂಪಾ ಉಪಸ್ಥಿತರಿದ್ದರು.
ಕೆ.ದಿವಾಕರ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಣೂರು ಮೋಹನ್‌ದಾಸ್ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಶರತ್ ಕುಮಾರ್ ವಂದಿಸಿದರು. ಫೊಟೋಕ್ಯಾಪ್ಶನ್-ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.







