ಅತ್ಯಂತ ವೇಗವಾಗಿ 25ನೆ ಶತಕ ಬಾರಿಸಿದ ಕೊಹ್ಲಿ

ತೆಂಡುಲ್ಕರ್ ಇನಿಂಗ್ಸ್ ದಾಖಲೆ ಮುರಿದ ದಿಲ್ಲಿ ಬ್ಯಾಟ್ಸ್‌ಮನ್
ಕ್ಯಾನ್‌ಬೆರಾ, ಜ.20: ಆಸ್ಟ್ರೇಲಿಯ ವಿರುದ್ಧದ ನಾಲ್ಕನೆ ಏಕದಿನ ಪಂದ್ಯದಲ್ಲಿ ಭಾರತದ ದಾಂಡಿಗ ವಿರಾಟ್ ಕೊಹ್ಲಿ ಅತ್ಯಂತ ವೇಗವಾಗಿ 25ನೆ ಶತಕವನ್ನು ಬಾರಿಸಿದರು. ಈ ಮೂಲಕ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಇನಿಂಗ್ಸ್ ದಾಖಲೆಯನ್ನು ಮುರಿದಿದ್ದಾರೆ.
170ನೆ ಏಕದಿನ ಪಂದ್ಯದ 162ನೆ ಇನಿಂಗ್ಸ್‌ನಲ್ಲಿ 25ನೆ ಶತಕವನ್ನು ಪೂರೈಸಿರುವ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ ಹಾಗೂ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್(279 ಇನಿಂಗ್ಸ್) ದಾಖಲೆಯನ್ನು ಮುರಿದರು. ತೆಂಡುಲ್ಕರ್ 234ನೆ ಇನಿಂಗ್ಸ್‌ನಲ್ಲಿ 25ನೆ ಶತಕ ಬಾರಿಸಿದ್ದರು. ಇದೀಗ ಕೊಹ್ಲಿ ಗರಿಷ್ಠ ಏಕದಿನ ಶತಕ ದಾಖಲಿಸಿದವರ ಪಟ್ಟಿಯಲ್ಲಿ ನಾಲ್ಕನೆ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾದ ಬ್ಯಾಟಿಂಗ್ ದಂತಕತೆ ಕುಮಾರ ಸಂಗಕ್ಕರ ಅವರೊಂದಿಗೆ ನಾಲ್ಕನೆ ಸ್ಥಾನ ಹಂಚಿಕೊಂಡಿದ್ದಾರೆ. ಸಂಗಕ್ಕರ 404 ಏಕದಿನ ಪಂದ್ಯಗಳಲ್ಲಿ 25 ಶತಕಗಳನ್ನು ಬಾರಿಸಿದ್ದರು.
ಕೊಹ್ಲಿ ಆಸ್ಟ್ರೇಲಿಯ ವಿರುದ್ಧದ ಪ್ರಸ್ತುತ ಸರಣಿಯಲ್ಲಿ ಸತತ ಎರಡನೆ ಶತಕ ದಾಖಲಿಸಿದರು. ಪರ್ತ್‌ನಲ್ಲಿ 91 ಹಾಗೂ ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ 59 ರನ್ ಗಳಿಸಿದ್ದರು.
ರವಿವಾರ ಮೆಲ್ಬೋರ್ನ್‌ನಲ್ಲಿ ನಡೆದ ಮೂರನೆ ಏಕದಿನದಲ್ಲಿ ಶತಕವನ್ನು ಸಿಡಿಸಿದ್ದ ಕೊಹ್ಲಿ ಬುಧವಾರ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲೂ 92 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್‌ಗಳ ಸಹಿತ 106 ರನ್ ಗಳಿಸಿದ್ದರು. ಆರಂಭಿಕ ದಾಂಡಿಗ ಶಿಖರ್ ಧವನ್(126) ಅವರೊಂದಿಗೆ ಎರಡನೆ ವಿಕೆಟ್‌ಗೆ 212 ರನ್ ಜೊತೆಯಾಟ ನಡೆಸಿ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಆದಾಗ್ಯೂ ಭಾರತ 25 ರನ್‌ಗಳ ಅಂತರದಿಂದ ಪಂದ್ಯವನ್ನು ಸೋತಿದೆ.
ಕೊಹ್ಲಿ ಅವರು ಸುನೀಲ್ ಗವಾಸ್ಕರ್ ಬಳಿಕ ಆಸ್ಟ್ರೇಲಿಯದ ವಿರುದ್ಧ ಅದರದೇ ನೆಲದಲ್ಲಿ ಸತತ ನಾಲ್ಕು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಭಾರತದ ಎರಡನೆ ದಾಂಡಿಗನಾಗಿದ್ದಾರೆ. ಗವಾಸ್ಕರ್ 1985-86ರ ಬೆನ್ಸನ್-ಹೆಜಸ್ ವರ್ಲ್ಡ್ ಸಿರೀಸ್ ಕಪ್‌ನಲ್ಲಿ 59, ಔಟಾಗದೆ 92, 77, 72 ರನ್ ಗಳಿಸಿದ್ದರು.
ಕಡಿಮೆ ಇನಿಂಗ್ಸ್‌ಗಳಲ್ಲಿ 25 ಶತಕ ಬಾರಿಸಿದ ಅಗ್ರ-5 ದಾಂಡಿಗರು
ಇನಿಂಗ್ಸ್ ಆಟಗಾರ
162 ವಿರಾಟ್ ಕೊಹ್ಲಿ
234 ಸಚಿನ್ ತೆಂಡುಲ್ಕರ್
279 ರಿಕಿ ಪಾಂಟಿಂಗ್
373 ಸನತ್ ಜಯಸೂರ್ಯ
379 ಕುಮಾರ ಸಂಗಕ್ಕರ







