ನಾಲ್ಕನೆ ಏಕದಿನ ಸೋಲಿಗೆ ತಾನೇ ಹೊಣೆ: ಧೋನಿ

ಕ್ಯಾನ್‌ಬೆರ್ರಾ, ಜ.20: ‘‘ಆಸ್ಟ್ರೇಲಿಯ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ರನ್ ಬೆನ್ನಟ್ಟುವಾಗ ಆಗಿರುವ ವೈಫಲ್ಯಕ್ಕೆ ಸಂಪೂರ್ಣ ತಾನೇ ಹೊಣೆಯಾಗಿರುವೆ’’ ಎಂದು ನಾಯಕ ಎಂಎಸ್ ಧೋನಿ ಹೇಳಿದ್ದಾರೆ.
‘‘ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ರನ್ ಚೇಸಿಂಗ್‌ಗೆ ಭದ್ರಬುನಾದಿ ಹಾಕಿಕೊಟ್ಟಿದ್ದರೂ ತಂಡ ಸೋತಿರುವುದಕ್ಕೆ ತಾನೇ ಸಂಪೂರ್ಣ ಜವಾಬ್ದಾರಿಯಾಗಿದ್ದೇನೆ’’ ಎಂದು ಧೋನಿ ತಿಳಿಸಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ 4ನೆ ಏಕದಿನ ಪಂದ್ಯದಲ್ಲಿ ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆದರೆ, 46 ರನ್ ಸೇರಿಸುವಷ್ಟರಲ್ಲಿ ಕೊನೆಯ 9 ವಿಕೆಟ್‌ಗಳನ್ನು ಕಳೆದುಕೊಂಡು 49.2 ಓವರ್‌ಗಳಲ್ಲಿ 323 ರನ್‌ಗೆ ಆಲೌಟಾಗಿತ್ತು. ಧೋನಿ ಖಾತೆ ತೆರೆಯಲು ವಿಫಲರಾಗಿದ್ದರು.
‘‘ತಂಡ ಸೋತಿರುವುದಕ್ಕೆ ತನಗೆ ಕೋಪ ಆಗಿಲ್ಲ. ಆದರೆ, ತುಂಬಾ ನಿರಾಸೆಯಾಗಿದೆ. ಸರಣಿಯಲ್ಲಿ ಈ ಪಂದ್ಯದಲ್ಲಿ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೆವು. ತಾನು ಜವಾಬ್ದಾರಿಯಿಂದ ಆಡಬೇಕಾಗಿತ್ತು. ಇನಿಂಗ್ಸ್‌ನ ಕೊನೆಯ ತನಕ ಕ್ರೀಸ್‌ನಲ್ಲಿರಬೇಕಾಗಿತ್ತು. ನಾನು ಬೇಗನೆ ಔಟಾದ ಕಾರಣ ಯುವ ಆಟಗಾರರು ಒತ್ತಡಕ್ಕೆ ಸಿಲುಕಿದರು’’ ಎಂದು ಧೋನಿ ಅಭಿಪ್ರಾಯಪಟ್ಟರು.
‘‘ರೋಹಿತ್, ಶಿಖರ್ ಧವನ್ ಹಾಗೂ ಕೊಹ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಕಳೆದ ಐದು ವರ್ಷಗಳಿಂದ ನಮ್ಮ ತಂಡದ ಬೌಲಿಂಗ್ ವಿಭಾಗ ಶಕ್ತಿಶಾಲಿಯಾಗಿಲ್ಲ. ಇದು ತಂಡದ ಸೋಲಿಗೆ ಕಾರಣವಾಗಿದೆ’’ ಎಂದು ಧೋನಿ ತಿಳಿಸಿದ್ದಾರೆ.







