ಲೋಕಾಯುಕ್ತ ನೇಮಕ; ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ: ಮುಖ್ಯಮಂತ್ರಿ

ಬೆಂಗಳೂರು, ಜ.20: ರಾಜ್ಯದ ನೂತನ ಲೋಕಾಯುಕ್ತ ನ್ಯಾಯ ಮೂರ್ತಿ ನೇಮಕಾತಿಗೆ ಸಂಬಂಧಿಸಿದಂತೆ ಸಲಹಾ ಸಮಿತಿಯ ಮತ್ತೊಂದು ಸಭೆ ಕರೆದು ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆಸಿದ ಸಭೆಯು ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ನಡೆದಿಲ್ಲ ಎಂಬ ಆಕ್ಷೇಪ ಕೇಳಿ ಬಂದಿದೆ. ಆದುದರಿಂದ, ಜ.25ರಂದು ಮತ್ತೊಂದು ಸುತ್ತಿನ ಸಭೆ ನಡೆಸಿ ನೂತನ ಲೋಕಾಯುಕ್ತರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು ಎಂದರು.
ಸ್ಪೀಕರ್, ಸಭಾಪತಿ, ಉಭಯ ಸದನಗಳ ವಿಪಕ್ಷ ನಾಯಕರು, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯನ್ನು ಒಳಗೊಂಡ ಲೋಕಾಯುಕ್ತ ನೇಮಕಾತಿ ಸಲಹಾ ಸಮಿತಿ ಸಭೆಯಲ್ಲಿ ನ್ಯಾ.ವಿಕ್ರಮ್‌ಜೀತ್ ಸೇನ್ ಹಾಗೂ ನ್ಯಾ.ಎಸ್.ಆರ್.ನಾಯಕ್ ಹೆಸರುಗಳು ಚರ್ಚಿಸಲ್ಪಟ್ಟಿದ್ದವು ಎಂದು ಅವರು ಹೇಳಿದರು.
ವರ್ಷದ ಮೊದಲ ಜಂಟಿ ಅಧಿವೇಶನವನ್ನು ನಡೆಸುವ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
Next Story





