ಉತ್ತರ ಪ್ರದೇಶಕ್ಕೆ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿ

ಮುಂಬೈ, ಜ.20: ಎರಡು ಬಾರಿಯ ಚಾಂಪಿಯನ್ ಬರೋಡಾವನ್ನು 38 ರನ್‌ಗಳ ಅಂತರದಿಂದ ಮಣಿಸಿದ ಉತ್ತರ ಪ್ರದೇಶ ತಂಡ ಚೊಚ್ಚಲ ಮುಶ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಯನ್ನು ಗೆದ್ದುಕೊಂಡಿದೆ.
ಬುಧವಾರ ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಸುರೇಶ್ ರೈನಾ ನಾಯಕತ್ವದ ಉತ್ತರ ಪ್ರದೇಶ 2011-12 ಹಾಗೂ 2013-14 ಟೂರ್ನಿಯ ಚಾಂಪಿಯನ್ ಬರೋಡಾವನ್ನು ಸೋಲಿಸಿತು.
ಗ್ರೂಪ್ ಹಂತದಲ್ಲಿ ಐದು ಪಂದ್ಯಗಳನ್ನು ಜಯಿಸಿರುವ ಉತ್ತರ ಪ್ರದೇಶ ಸತತ 9ನೆ ಗೆಲುವು ಸಾಧಿಸಿತು. ಉ.ಪ್ರ ತಂಡ ಆರಂಭಿಕ ಪ್ರಶಾಂತ್ ಗುಪ್ತಾ (49 ರನ್) ಹಾಗೂ ರೈನಾ (ಔಟಾಗದೆ 47) ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 163 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬರೋಡಾ ತಂಡ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಅಂಕಿತ್ ರಾಜ್‌ಪುತ್(3-30), ಅಮಿತ್ ಮಿಶ್ರಾ(2-33) ಹಾಗೂ ಕುಲ್‌ದೀಪ್ ಯಾದವ್(2-16) 7 ವಿಕೆಟ್‌ಗಳನ್ನು ಹಂಚಿಕೊಂಡರು.
ಬಿಗ್ ಹಿಟ್ಟರ್ ಯೂಸುಫ್ ಪಠಾಣ್ 27 ಎಸೆತಗಳಲ್ಲಿ 14 ರನ್ ಗಳಿಸಿ ನಿರಾಸೆಗೊಳಿಸಿದರು. ನಾಯಕ ಇರ್ಫಾನ್ ಪಠಾಣ್ 7ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಬರೋಡಾಕ್ಕೆ ಪ್ರತಿ ಓವರ್‌ಗೆ 12 ರನ್ ಗಳಿಸಬೇಕಾಗಿತ್ತು.





