ರಾಜಸ್ಥಾನದಲ್ಲಿ 37 ಕೋಟಿ ರೂ. ವೆಚ್ಚದಲ್ಲಿ 1-8 ತರಗತಿಗಳ ಪಠ್ಯಪುಸ್ಯಕ ಕೇಸರೀಕರಣ?
ಹೊಸದಿಲ್ಲಿ, ಜ.20: ರಾಜಸ್ಥಾನ ಸರಕಾರವು 1ರಿಂದ 8ನೆ ತರಗತಿವರೆಗಿನ ಹೊಸ ಪಠ್ಯಪುಸ್ತಕಗಳ ಮುದ್ರಣಕ್ಕಾಗಿ ಸುಮಾರು37 ಕೋಟಿ ರೂ. ಖರ್ಚು ಮಾಡುತ್ತಿದೆ. ತನ್ನ ಸಮಾಜ- ವಿಜ್ಞಾನ ಪಾಠಗಳಲ್ಲಿ ಮಹಾರಾಜ ಸೂರಜ್‌ಮಲ್, ಹೇಮು ಕಲಾನಿ ಹಾಗೂ ಗೋವಿಂದ ಗುರುಗಳಂತಹ ಚಾರಿತ್ರಿಕ ವ್ಯಕ್ತಿಗಳ ಸೇರ್ಪಡೆ, ಮಹಾರಾಣಾ ಪ್ರತಾಪನಂತಹ ಸಮರ-ದೊರೆಗಳ ವೈಭವೀಕರಣ ಹಾಗೂ ಮೊಗಲ್ ಚಕ್ರವರ್ತಿ ಅಕ್ಬರನಂತಹ ‘ದಾಳಿಕೋರರ’ ದೊಡ್ಡತನವನ್ನು ಪ್ರಶ್ನಿಸುವ ದೊಡ್ಡ ಯೋಜನೆಯೊಂದರ ಭಾಗ ಇದಾಗಿದೆ.
2016-17ನೆ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಮಾಧ್ಯೆಮಿಕ ತರಗತಿಗಳಲ್ಲಿ ಕಲಿಸಲಾಗುವ ಎಲ್ಲ 36 ಪುಸ್ತಕಗಳ ಹೊಸ ಕಾರ್ಯಸೂಚಿಯನ್ನು ಆಧರಿಸಲಿದೆ. ಟೀಕಾಕರರು ಅದನ್ನು ಕೇಸರೀಕರಣ ಎಂದು ಕರೆದಿದ್ದಾರೆ.
ರಾಜಸ್ಥಾನದ ಪಠ್ಯ ಪುಸ್ತಕಗಳು ಕೇವಲ 2 ವರ್ಷಗಳ ಹಿಂದೆ ಬದಲಾಗಿದ್ದವು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತವಿತ್ತು. 2012-13ರಲ್ಲಿ 1,3 ಹಾಗೂ 5ನೆ ತರಗತಿಗಳಿಗೆ ಎಲ್ಲ ವಿಷಯಗಳ ಹೊಸ ಪಠ್ಯಪುಸ್ತಕಗಳನ್ನು ಪರಿಚಯಿಸಲಾಗಿತ್ತು. 6 ಹಾಗೂ 7ನೆ ತರಗತಿಗಳ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಲಾಗಿತ್ತು. ಬಳಿಕ 2013-14ರಲ್ಲಿ 2 ಮತ್ತು 4ನೆ ತರಗತಿಗಳಿಗೆ ಎಲ್ಲ ವಿಷಯಗಳ ಹೊಸ ಪಠ್ಯಪುಸ್ತಕಗಳು ಹಾಗೂ 8ನೆ ತರಗತಿಗೆ ಹೊಸ ಸಮಾಜ ವಿಜ್ಞ್ಞಾನ ಪುಸ್ತಕವನ್ನು ತರಲಾಗಿತ್ತು.
ಈ ಎಲ್ಲ ಪುಸ್ತಕಗಳನ್ನು ಹಿಂದಕ್ಕೆ ಪಡೆದಿರುವ ರಾಜಸ್ಥಾನ ರಾಜ್ಯ ಪಠ್ಯಪುಸ್ತಕ ಮಂಡಳಿ (ಆರ್‌ಎಸ್‌ಟಿಐ) ಅವುಗಳನ್ನೆಲ್ಲ ಹರಾಜು ಹಾಕಿದೆ.
ಈಗ ಕೈಬಿಡಲಾಗಿರುವ 2012-13ನೆ ಸಾಲಿನವರೆಗಿನ ಪಠ್ಯಪುಸ್ತಕಗಳನ್ನು ಗೋದಾಮುಗಳನ್ನು ತೆರವುಗೊಳಿಸುವುದಕ್ಕಾಗಿ ಹರಾಜು ಮಾಡಲಾಗಿದೆ. 1ರಿಂದ 8ನೆ ತರಗತಿಯವರೆಗೆ ತಾವು 5.66 ಕೋಟಿ ಹೊಸ ಪಠ್ಯಪುಸ್ತಕಗಳನ್ನು ಮುದ್ರಿಸುತ್ತಿದ್ದೇವೆ. ಅವುಗಳ ದಾಸ್ತಾನಿಗೆ ಸ್ಥಳ ಬೇಕಾಗಿದೆಯೆಂದು ಆರ್‌ಎಸ್‌ಟಿಐಯ ಕಾರ್ಯದರ್ಶಿ ದೀಪ್ತಿ ಕಚ್ಚಾವಾಲಾ ತಿಳಿಸಿದ್ದಾರೆ.
ಮಂಡಳಿಯು ಹೊಸ ಪಠ್ಯಕ್ರಮದಂತೆ 9 ಹಾಗೂ 11ನೆ ತರಗತಿಗಳಿಗೂ 1.23 ಕೋಟಿ ಪುಸ್ತಕಗಳನ್ನು ಮುದ್ರಿಸಲಿದೆ.
ಸರಕಾರಿ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಹಾಗೂ ಸರಸ್ವತಿ ವಂದನೆಗಳನ್ನು ಅಳವಡಿಸುವ ತನ್ನ ಯೋಜನೆಯಿಂದಾಗಿ ರಾಜಸ್ಥಾನದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ವಾಸುದೇವ ದೇವ್ನಾನಿ ಈ ಹಿಂದೊಮ್ಮೆ ವಿವಾದ ಸೃಷ್ಟಿಸಿದ್ದರು.
ಹೊಸ ಪಠ್ಯಪುಸ್ತಕಗಳ ಕುರಿತು ಟೀಕೆಗಳಿಂದ ಎದೆಗುಂದದ ದೇವ್ನಾನಿ, ತಾನು ಕೇವಲ ತಿರುಚಲ್ಪಟ್ಟಿರುವ ಚರಿತ್ರೆಯನ್ನು ಸರಿಪಡಿಸುತ್ತಿದ್ದೇನೆ ಹಾಗೂ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ವೌಲ್ಯಗಳನ್ನು ಪ್ರೋತ್ಸಾಹಿಸುತ್ತಿದ್ದೇನೆಂದು ಎಚ್‌ಟಿಗೆ ನೀಡಿದ್ದ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದು ಕೇಸರಿಕರಣವಲ್ಲ ಶಿಕ್ಷಣವು ರಾಜಕೀಯ ಹಾಗೂ ಮತೀಯವಾದವನ್ನು ಮೀರಿರಬೇಕು. ಕೆಲವು ವ್ಯಕ್ತಿಗಳು ಸ್ಥಾಪಿತ ಹಿತಾಸಕ್ತಿಗಾಗಿ ಈ ವಿಷಯವನ್ನು ರಾಜಕೀಯಗೊಳಿಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ಆದಾಗ್ಯೂ ಶಿಕ್ಷಣ ತಜ್ಞರು ಈ ನಿರ್ಧಾರವನ್ನು ‘ಶಿಕ್ಷಣದ ಹೈಂದವೀಕರಣ’ ಎಂದು ವ್ಯಾಖ್ಯಾನಿಸಿದ್ದಾರೆ.
ಬಲಪಂಥೀಯ ಶಕ್ತಿಗಳು ಅಧಿಕಾರಕ್ಕೆ ಬಂದಾಗ ಶಿಕ್ಷಣದ ಮೇಲೆ ಈ ಸ್ವರೂಪದ ದಾಳಿ ನಡೆಸುತ್ತಾರೆ. ಆದರೆ, ಈ ಬಾರಿ ಅವರು ಕೇಂದ್ರದಲ್ಲೂ ಅಧಿಕಾರದಲ್ಲಿರುವುದರಿಂದ ಬದಲಾವಣೆಯ ಸ್ವರೂಪ ಭಿನ್ನವಾಗಿದೆ. ಅವರು ಸಂಯುಕ್ತ ಸಂಸ್ಕೃತಿ ಹಾಗೂ ಜಾತ್ಯತೀತತೆಗಳನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆಂದು ರಾಜಸ್ಥಾನ ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ. ರಾಜೀವ ಗುಪ್ತಾ ಆರೋಪಿಸಿದ್ದಾರೆ.





