ಚುಟುಕು ಸುದ್ದಿಗಳು
ಅಮ್ಮನೆಡೆಗೆ ನಮ್ಮ ನಡೆ
ಮಂಗಳೂರು, ಜ.20: ಮರವೂರು ಪಾದಯಾತ್ರೆ ಸಮಿತಿ ವತಿಯಿಂದ ಕಟೀಲು ಕ್ಷೇತ್ರಕ್ಕೆ 3ನೆ ವರ್ಷದ ಪಾದಯಾತ್ರೆ ‘ಅಮ್ಮನೆಡೆಗೆ ನಮ್ಮ ನಡೆ’ ಜ.24ರಂದು ನಡೆಯಲಿದೆ ಎಂದು ಸಮಿತಿಯ ಸಂಚಾಲಕ ಭಾಸ್ಕರ್ ರೈ ಕುಕ್ಕುವಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಂದು ಬೆಳಗ್ಗೆ 7:30ಕ್ಕೆ ಮರವೂರು ಸೇತುವೆ ಬಳಿಯ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಸಂಸದ ನಳಿನ್‌ಕುಮಾರ್ ಕಟೀಲು ಚಾಲನೆ ನೀಡಲಿದ್ದಾರೆ. 11 ಗಂಟೆಗೆ ಕಟೀಲು ದೇವಾಲಯದಲ್ಲಿ ದೇವಿಯ ದರ್ಶನ ಮಾಡಲಾಗುವುದು. ಬೆಳಗ್ಗೆ ಆಯ್ದ ಕೆಲ ಸ್ಥಳಗಳಿಂದ ಭಕ್ತರನ್ನು ಪಾದಯಾತ್ರೆಗೆ ಕರೆತರಲು ಜಿಲ್ಲೆಯ ಬಸ್ಸು ಮಾಲಕರ ಸಹಕಾರದಿಂದ ವಾಹನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಸಂದೀಪ್ ಶೆಟ್ಟಿ ಮರವೂರು, ಸಂಚಾಲಕರಾದ ಸುಖೇಶ್ ಶೆಟ್ಟಿ ಮುಂಡಾರು ಗುತ್ತು, ರಾಘವ ಎಂ., ಯೋಜನಾಧಿಕಾರಿ ವೇಣು ಗೋಪಾಲ ಪುತ್ರನ್ ಉಪಸ್ಥಿತರಿದ್ದರು.
ಕಾರ್ನಾಡ್: ನಾಳೆಯಿಂದ ವಾರ್ಷಿಕ ಸ್ವಲಾತ್ ಮಜ್ಲಿಸ್
ಮಂಗಳೂರು, ಜ.20: ಮುಲ್ಕಿ ಕೇಂದ್ರ ಶಾಫಿ ಜುಮಾ ಮಸೀದಿಯ ಅಧೀನಕ್ಕೊಳಪಟ್ಟ ಕಾರ್ನಾಡ್‌ನ ಮಸ್ಜಿದುನ್ನೂರಿನಲ್ಲಿ ಜ.22ರಿಂದ ಜ.24ರವರೆಗೆ ಸಂಜೆ 6ರಿಂದ 10ರವರೆಗೆ ವಾರ್ಷಿಕ ಸ್ವಲಾತ್ ಮಜ್ಲಿಸ್ ಹಾಗೂ ಧಾರ್ಮಿಕ ಪ್ರವಚನ ಜರಗಲಿದೆ.ಕಾರ್ಯಕ್ರಮವನ್ನು ಶೈಖುನಾ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸುವರು. ಶೈಖುನಾ ಅಲ್ಹಾಜ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ದುಆಗೈಯುವರು. ಇಕ್ಬಾಲ್ ಅಹ್ಮದ್ ಮುಲ್ಕಿ ಅಧ್ಯಕ್ಷತೆ ವಹಿಸುವರು.
ಜ.24ರಂದು ಸಂಜೆ 4ಕ್ಕೆ ಕಾರ್ನಾಡ್ ಮಸ್ಜಿದುನ್ನೂರು ಬಳಿ ನೂತನ ವಸತಿ ಸಮುಚ್ಚಯ, ಹಿಫ್ಲುಲ್ ಕುರ್‌ಆನ್, ಯತೀಂಖಾನ ಕಟ್ಟಡಕ್ಕೆ ದ.ಕ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಶಿಲಾನ್ಯಾಸ ನೆರವೇರಿಸುವರು ಎಂದು ಪ್ರಕಟನೆ ತಿಳಿಸಿದೆ.
ಲೋಕಾಯುಕ್ತರಿಂದ ದೂರು ಸ್ವೀಕಾರ
ಉಡುಪಿ, ಜ.20: ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ವಿಚಾರಣೆ ಬಯಸುವ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರು ಸಲ್ಲಿಸಬಹುದು. ಇದಕ್ಕಾಗಿ ಈ ಕೆಳಕಂಡ ಸ್ಥಳಗಳಲ್ಲಿ ಅರ್ಜಿ ಸ್ವೀಕರಿಸಲಾಗುವುದು.
ಜ.21ರಂದು ಪೂರ್ವಾಹ್ನ 11:30ರಿಂದ 1ರವರೆಗೆ ಉಡುಪಿ ಪ್ರವಾಸಿ ಮಂದಿರ, ಅಪರಾಹ್ನ 3ರಿಂದ 4:30ರವರೆಗೆ ಕಾರ್ಕಳ ಪ್ರವಾಸಿ ಮಂದಿರ ಹಾಗೂ ಜ.22ರಂದು ಪೂರ್ವಾಹ್ನ 11:30ರಿಂದ 1ರವರೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದು.
ಸಾರ್ವಜನಿಕರು ನಿಗದಿತ ದೂರು ಅರ್ಜಿಗಳಾದ ಪ್ರಪತ್ರ1 ಮತ್ತು 2ನ್ನು ಪಡೆದು ಅಫಿದಾವಿತ್ ಮಾಡಿಸಿ, ಸಂಬಂಧಪಟ್ಟ ದಾಖಲೆಗಳ ಪ್ರತಿಗಳೊಂದಿಗೆ ದೂರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಉಡುಪಿ ಘಟಕದ ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆೆ ತಿಳಿಸಿದೆ.
ನಾಳೆ ಬಿಜೆಪಿ ಕಾರ್ಯಕರ್ತರ ಸಭೆ
ಮಂಗಳೂರು, ಜ.20: ದ.ಕ. ಜಿಪಂ, ತಾಪಂ ಚುನಾವಣೆಗೆ ಕಾರ್ಯಕರ್ತರನ್ನು ಚುನಾವಣಾ ಕೆಲಸ ಕಾರ್ಯಗಳಲ್ಲಿ ತೊಡಗಿಸುವ ಸಲುವಾಗಿ ಬಿಜೆಪಿ ಕಾರ್ಯಕರ್ತರ ಸಮಾವೇಶವು ಜ.22ರಂದು ಬೆಳಗ್ಗೆ 10:30ಕ್ಕೆ ಫರಂಗಿಪೇಟೆ ಯಶಸ್ವಿಹಾಲ್‌ನಲ್ಲಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.
23-24: ಕಿಶೋರ ಯಕ್ಷೋತ್ಸವ
ಕಾರ್ಕಳ, ಜ.20: ಸ್ಥಳೀಯ ಯಕ್ಷಕಲಾ ರಂಗದ ವತಿಯಿಂದ ಕಿಶೋರ ಯಕ್ಷೋತ್ಸವ-2016 ಅನಂತಶಯನ ಕಸ್ತೂರಿ ಸಾಂಸ್ಕೃತಿಕ ರಂಗ ಮಂಟಪದಲ್ಲಿ ಜ.23 ಮತ್ತು 24ರಂದು ನಡೆಯಲಿದೆ. ಅಂದು ಬೆಳಗ್ಗೆ 9:30ಕ್ಕೆ ಶಾಸಕ ವಿ.ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಹರಿನಾರಾಯಣ ಅಸ್ರಣ್ಣ ಆಶೀರ್ವಚನ ನೀಡುವರು. 24ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಮೋಹನ ಆಳ್ವ ಸಮಾರೋಪ ಭಾಷಣ ಮಾಡುವರು. ಯಕ್ಷೋತ್ಸವದಲ್ಲಿ 23ರಂದು ರಾಮಾಶ್ವಮೇಧ, ಭಕ್ತ ಮಾರ್ಕಾಂಡೇಯ, ಧಕ್ಷಾಧ್ವರ, ಗುರುದಕ್ಷಿಣೆ, ಭಕ್ತಾಂಜನೇಯ, 24ರಂದು ಸುದರ್ಶನ ಗರ್ವಭಂಗ, ಸುಂದೋಪಸುಂದ, ಕಾಳಿಂಗ ಮರ್ಧನ, ಪಂಚವಟಿ, ಲಂಕಾದಹನ, ಅಶ್ವಮೇಧ ಯಕ್ಷಗಾನಗಳು ಪ್ರದರ್ಶನಗೊಳ್ಳಲಿವೆ.
ಇಂದು ಉಡುಪಿಗೆ ಧನ್ವಂತರಿ ಆಯುರ್ ಜ್ಯೋತಿ ರಥಯಾತ್ರೆ
ಉಡುಪಿ, ಜ.20: ಭಾರತೀಯ ವೈದ್ಯ ಪದ್ಧ್ದತಿಗಳ ಮಹತ್ವವನ್ನು ಸಾರಲು ಧನ್ವಂತರಿ ಆಯುರ್ ಜ್ಯೋತಿ ರಥಯಾತ್ರೆ ಆಯೋಜಿಸಿದ್ದು, ಈ ರಥಯಾತ್ರೆ ಜ.21ರಂದು ಉಡುಪಿಗೆ ಆಗಮಿಸಲಿದೆ. ಈ ರಥಯಾತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಡಿ.14ರಂದು ಉದ್ಘಾಟಿಸಿದ್ದರು.
ತುಂಬೆ : ವಾರ್ಷಿಕ ಸ್ವಲಾತ್ ಸಮಾರೋಪ
ಬಂಟ್ವಾಳ, ಜ.20: ತುಂಬೆ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮೀಲಾದುನ್ನಬಿ ಹಾಗೂ ಸ್ವಲಾತ್‌ನ ವಾರ್ಷಿಕೋತ್ಸವದ ಪ್ರಯುಕ್ತ ಧಾರ್ಮಿಕ ಪ್ರವಚನ, ಕಥಾ ಪ್ರಸಂಗ ಹಾಗೂ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಇತ್ತೀಚೆಗೆ ತುಂಬೆ ಬಿ.ಎ.ಮೈದಾನದಲ್ಲಿ ನಡೆಯಿತು. ಸಮಾರೋಪ ಸಮಾರಂಭಕ್ಕೂ ಮೊದಲು ನಡೆದ ಬೃಹತ್ ಸ್ವಲಾತ್ ಮಜ್ಲಿಸ್‌ನ ನೇತೃತ್ವವನ್ನು ಅಲ್ ಹಾಜ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ವಹಿಸಿದ್ದರು. ಸಮಾರೋಪ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರದ ಸದಸ್ಯ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ವಹಿಸಿದ್ದರು.
ತುಂಬೆ ಜುಮಾ ಮಸೀದಿಯ ಗೌರವಾಧ್ಯಕ್ಷ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್, ದ.ಕ. ವಕ್ಫ್ ಮಂಡಳಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉದ್ಯಮಿ ಹಾಜಿ ಮುಹಮ್ಮದ್ ಅಶ್ರಫ್ ತುಂಬೆ, ತುಂಬೆ ಜುಮಾ ಮಸೀದಿ ಖತೀಬ್ ಡಿ.ಎ.ಇಸ್ಮಾಯೀಲ್ ಫೈಝಿ ಹಾಗೂ ಮದ್ರಸ ಅಧ್ಯಾಪಕರು ಉಪಸ್ಥಿತರಿದ್ದರು. ಜುಮಾ ಮಸೀದಿ ಉಪಾಧ್ಯಕ್ಷ ಅಬೂಬಕರ್ ಹಾಜಿ ಸ್ವಾಗತಿಸಿ, ಅಧ್ಯಕ್ಷ ಟಿ.ಎಂ.ಮೂಸಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಮದ್ರಸ ಮ್ಯಾನೇಜ್‌ಮೆಂಟ್ ಮುಖ್ಯಸ್ಥ ಅಝೀಝ್ ಟಿ.ಎ. ಧನ್ಯವಾದಗೈದರು. ಖಲಂದರ್ ಕಾರ್ಯಕ್ರಮ ನಿರೂಪಿಸಿದರು.
ವ್ಯಕ್ತಿತ್ವ ವಿಕಸನ ತರಬೇತಿ
ಬಂಟ್ವಾಳ, ಜ.20: ಕಲ್ಲಡ್ಕದ ಅನುಗ್ರಹ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜು ಇಲ್ಲಿನ ಉಪನ್ಯಾಸಕಿಯರು ಹಾಗೂ ವಿದ್ಯಾರ್ಥಿನಿಯರಿಗೆ ವ್ಯಕ್ತಿತ್ವ ವಿಕಸನ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಹೋಪ್ ಫೌಂಡೇಶನ್‌ನ ಸೈಫ್ ಸುಲ್ತಾನ್ ತರಬೇತುದಾರರಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕ ಯಾಸೀನ್ ಬೇಗ್, ಕಾರ್ಯದರ್ಶಿಗಳಾದ ಡಿ.ಕೆ. ಇಬ್ರಾಹೀಂ ಹಾಗೂ ಜಂಟಿ- ಕಾರ್ಯದರ್ಶಿಗಳಾದ ಮಹಮ್ಮದ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿರತ್ನಾ ರೆಜಿನಾಲ್ಡ್ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ಉಪಸ್ಥಿತರಿದ್ದರು.
ಬೆಳ್ಳಾರೆ: ಮಖಾಂ ಉರೂಸ್
ಸುಳ್ಯ, ಜ.20: ಬೆಳ್ಳಾರೆ ಮಖಾಂ ಉರೂಸ್ ಆರಂಭಗೊಂಡಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ, ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಉರೂಸ್ ಸಮಿತಿಯ ಅಧ್ಯಕ್ಷ ಕೆ.ಎಂ.ಮುಹಮ್ಮದ್ ಹಾಜಿ ಬೆಳ್ಳಾರೆ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಮುಖ್ಯ ಭಾಷಣ ಮಾಡಿದರು ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಖತೀಬ್ ತಾಜುದ್ದೀನ್ ರಹ್ಮಾನಿ, ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ ಹಸನ್ ಅರ್ಶದಿ, ಸದರ್ ಉಸ್ತಾದ್ ಫಝಲ್ ರಹ್ಮಾನ್ ಮುಸ್ಲಿಯಾರ್, ಅಬ್ದುಲ್ ಖಾದರ್ ಬಾಯಂಬಾಡಿ, ಯಾಕೂಬ್ ದಾರಿಮಿ ಕಳಂಜ, ಇಸ್ಮಾಯೀಲ್ ಮುಸ್ಲಿಯಾರ್, ಅಬ್ಬಾಸ್ ಮುಸ್ಲಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಣಿಲೆ ವೆಂಕಪ್ಪರೈ ಪ್ರಶಸ್ತಿ ಪ್ರದಾನ ಸಮಾರಂಭ
ಪುತ್ತೂರು, ಜ.20: ರೋಯಲ್ ಟ್ರಸ್ಟ್ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಡಾ. ಪಿ.ಬಿ. ರೈ ಪ್ರತಿಷ್ಠಾನ ನೂಜಿ ಕೆಯ್ಯೂರು ವತಿಯಿಂದ ನೀಡಲಾಗುತ್ತಿರುವ ‘ಅಣಿಲೆ ವೆಂಕಪ್ಪ ರೈ ಪ್ರಶಸ್ತಿ-2016’ ಪ್ರದಾನ ಸಮಾರಂಭ ಜ.24ರಂದು ಪುತ್ತೂರಿನ ಜಿ.ಎಲ್. ರೋಟರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮಾರಂಭವನ್ನು ಸಾಮಾಜಿಕ ಕಾರ್ಯಕರ್ತ ಕೆಯ್ಯೂರು ನಾರಾಯಣ ಭಟ್ ಉದ್ಘಾಟಿಸುವರು.
ಈ ವೇಳೆ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈ, ರಂಗಕಲಾವಿದ ಚಿದಾನಂದ ಕಾಮತ್ ಕಾಸರಗೋಡು ಮತ್ತು ಪ್ರವಾಸೋದ್ಯಮಿ ಮಧುಕರ್‌ರಿಗೆ ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೃತಿಕಾ ಆರ್ ಐತಾಳ್, ನೀಮಾ ಎಚ್. ಕುಂಬ್ರ ಮತ್ತು ನಿರೀಕ್ಷಾ ಕೆ.ಜೆ ಅವರಿಗೆ ಬಹುಮುಖ ಪ್ರತಿಭೆ ಪುರಸ್ಕಾರ ನೀಡಲಾಗುವುದು. ಮದ್ಯಮುಕ್ತ ಕೃಷ್ಣ ಭಂಡಾರಿ ಮಾಡಾವು ಇವರನ್ನು ಗೌರವಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಗೌರವ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಸಂಚಾಲಕ ರಾಜೇಶ್ ಜೈನ್ ಮತ್ತು ಕಾರ್ಯದರ್ಶಿ ಆನಂದ ರೈ ಉಪಸ್ಥಿತರಿದ್ದರು.
ಸಅದಿಯ್ಯ ವಾರ್ಷಿಕ ಸನದುದಾನ ಸಮ್ಮೇಳನ: ಉಡುಪಿ ಜಿಲ್ಲಾ ಪ್ರಚಾರ ಸಮಿತಿ ರಚನೆ
ಉಡುಪಿ, ಜ.20: ಜಾಮಿಯ ಸಅದಿಯ್ಯ ಅರಬಿಯ್ಯದ 46ನೆ ಸನದುದಾನ ಮಹಾಸಮ್ಮೇಳನದ ಉಡುಪಿ ಜಿಲ್ಲಾ ಪ್ರಚಾರ ಸಮಿತಿಯನ್ನು ಇತ್ತೀಚೆಗೆ ಮೂಳೂರು ಮರ್ಕಝ್ ತಅಲೀಮಿಲ್ ಇಹ್ಸಾನ್‌ನಲ್ಲಿ ಇತ್ತೀಚೆಗೆ ರಚಿಸಲಾಯಿತು.
ಜಾಮಿಯ ಸಅದಿಯ್ಯ ಪ್ರೊಫೆಸರ್ ಮೌಲಾನ ಕೆ.ಸಿ.ರೋಡ್ ಹುಸೈನ್ ಸಅದಿ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ಅಧ್ಯಕ್ಷರಾಗಿ ಎಂಎಚ್‌ಬಿ ಮುಹಮ್ಮದ್ ಮೂಳೂರು, ಉಪಾಧ್ಯಕ್ಷರಾಗಿ ಹಾಜಿ ಹಾಜಬ್ಬ ಮದುವನ, ಹಮೀದ್ ಅದ್ದು ಮೂಳೂರು, ಕನ್ವೀನರ್‌ರಾಗಿ ಅಬ್ದುಲ್ಲಾ ಕಾಪು, ವೈಸ್ ಕನ್ವೀನರ್ ವೈಬಿಸಿ ಬಾವಾ ಮೂಳೂರು, ಇಲ್ಯಾಸ್ ಫಕೀರ್ಣಕಟ್ಟೆ, ಕೋಶಾಧಿಕಾರಿ ಅಬ್ದುರ್ರಝಾಕ್ ಹಾಜಿ ಮೂಳೂರು, ನಿರ್ದೇಶಕರಾಗಿ ಕೋಟೇಶ್ವರ ತಂಙಳ್, ಅಬ್ದುರ್ರಹ್ಮಾನ್ ಮದನಿ ಮೂಳೂರು, ಯು.ಕೆ ಮುಸ್ತಫಾ ಸಅದಿ ಮ್ಯಾನೇಜರ್ ಸುನ್ನಿ ಸೆಂಟರ್, ಅಬ್ದುರ್ರಶೀದ್ ಸಖಾಫಿ ಮಜೂರ್, ಸಂಚಾಲಕರಾಗಿ ಬದ್ರುದ್ದೀನ್ ಅಹ್ಸನಿ ಕಾಪು, ಅಶ್ರಫ್ ಸಖಾಫಿ ಕನ್ನಂಗಾರ್, ಹನೀಫ್ ಸಅದಿ ನಾವುಂದ, ಮುಹಮ್ಮದ್ ಅಲಿ ಸಅದಿ ಬರುವ, ಇಬ್ರಾಹೀಂ ಸಖಾಪಿ ಬೆಳಪು, ಸ್ವಾಬಿರ್ ಸಅದಿ ಸುನ್ನಿ ಸೆಂಟರ್, ಅಬ್ದುರ್ರಹ್ಮಾನ್ ಸಅದಿ ಮಜೂರ್, ಯೂಸುಫ್ ಕಾಪು, ಇಬ್ರಾಹೀಂ ಮೂಳೂರು, ಅಬ್ಬಾಸ್ ಫಕೀರ್ಣಕಟ್ಟೆ ಮುಂತಾದವರನ್ನು ಕಾರ್ಯಕ್ರಮ ನಿರ್ವಹಣಾ ಸಮಿತಿಗೆ ಆಯ್ಕೆ ಮಾಡಲಾಯಿತು.







