ದಲಿತ ಪಿಎಚ್‌ಡಿ ವಿದ್ಯಾರ್ಥಿಗೆ ಕಿರುಕುಳ: ರಾಜಸ್ಥಾನದ ಐವರು ಪ್ರಾಧ್ಯಾಪಕರ ವಿರುದ್ಧ ಕೇಸ್

ಅಜ್ಮೀರ್, ಜ.20: ರಾಜಸ್ಥಾನದ ಕೇಂದ್ರ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿವಿಯ ಉಪಕುಲಪತಿ ಸೇರಿದಂತೆ ಐವರು ಪ್ರೋಫೆಸರ್‌ಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ಥಳೀಯ ನ್ಯಾಯಾಲಯ ಪೊಲೀಸರಿಗೆ ಆದೇಶ ನೀಡಿದೆ.
ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೆಮುಲ ಅಮಾನತುಗೊಂಡ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಪ್ರಕರಣ ಇನ್ನೂ ಹಸಿರಾಗಿರುವಗಾಲೇ ರಾಜಸ್ಥಾನ ವಿವಿಯಲ್ಲೂ ಅಂತದ್ದೇ ಪ್ರಕರಣ ನಡೆದಿರುವುದು ವರದಿಯಾಗಿದೆ.
ವಿದ್ಯಾರ್ಥಿ ಉಮೇಶ್ ಕುಮಾರ‍್ ಜಾನ್‌ವಾಲ್ ನೀಡಿರುವ ದೂರಿನಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ರಿಸರ್ಚ್ ಸೂಪರ್‌ವೈಸರ್ ಮತ್ತು ಸೋಶಿಯಲ್ ವರ್ಕ್ ಡಿಪಾರ್ಟ್‌ಮೆಂಟ್‌ನ ಮುಖ್ಯಸ್ಥ ಜಗ್‌ದೀಶ್ ಉಲ್ಲಾಸ್ ಜಾಧವ್, ಅಸೋಸಿಯೆಟ್ ಪ್ರೊಫೆಸರ್ ಅತಿಕ್ ಅಹ್ಮದ್, ವಿವಿ ಉಪಕುಲಪತಿ ಎ.ಕೆ ಪೂಜಾರಿ, ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಜ್ಮೀರ್ ನ್ಯಾಯಾಲಯ ಆದೇಶ ನೀಡಿದೆ.
ವಿದ್ಯಾರ್ಥಿ ಉಮೇಶ್ ಕುಮಾರ‍್ ಜಾನ್‌ವಾಲ್ ಹದಿನೈದು ದಿನಗಳ ಕಾಲ ಗೈರು ಹಾಜರಾದ ಕಾರಣಕ್ಕಾಗಿ ವಿವಿಯಿಂದ ಉಚ್ಛಾಟನೆ ಮಾಡಲಾಗಿತ್ತು. ಗೈರುಹಾಜರಾತಿಯ ಬಗ್ಗೆ ವಿದ್ಯಾರ್ಥಿ ಉಮೇಶ್ ಕುಮಾರ್ ವೈದ್ಯಕೀಯ ಸರ್ಟಿಫೀಕೇಟ್ ನೀಡಿದ್ದರೂ, ವಿವಿ ತಿರಸ್ಕರಿಸಿತ್ತು. ಎನ್ನಲಾಗಿದೆ.ರಿಸರ್ಚ್ ಸುಪರ‍್ವೈಸರ್ ಮತ್ತು ಸೋಶಿಯಲ್ ವರ್ಕ್ ಡಿಪಾರ್ಟ್‌ಮೆಂಟ್‌ನ ಮುಖ್ಯಸ್ಥ ಜಗ್‌ದೀಶ್ ಉಲ್ಲಾಸ್ ಜಾಧವ್ ಪ್ರತಿ ಸೆಮಿಸ್ಟರ‍್ನಲ್ಲೂ ಹತ್ತು ಸಾವಿರ ರೂ. ಲಂಚ ಕೇಳುತ್ತಿದ್ದರು. ಮೂರು ಬಾರಿ ಅವರಿಗೆ ಹಣ ನೀಡಿರುವುದಾಗಿ ಹೇಳಿರುವ ಜಾನ್‌ವಾಲ್ ಬಳಿಕ ಹಣ ನೀಡದಕ್ಕಾಗಿ ಸಂಶೋಧನಾ ಕೆಲಸಕ್ಕೆ ಅಡ್ಡಿಪಡಿಸಿದರೆಂದು ಆರೋಪಿಸಿದ್ದಾರೆ.





