ಮಂಗಳೂರು : ಕಾಯಿಲೆ ಪೀಡಿತ ಬಾಲಕನಿಗೆ ನೆರವಾದ ಹಿದಾಯ ಫೌಂಡೇಶನ್

ಮಂಗಳೂರು : ಮೂತ್ರಕೋಶ ಸಂಬಂಧಿಸಿದ ಕಾಯಿಲೆಯಿಂದ ಹಲವು ಸಮಯದಿಂದ ಬಳಲುತ್ತಿದ್ದ ಬಂಟ್ವಾಳ ತಾಲೂಕಿನ ನೆಟ್ಲ ಮೂಡ್ನೂರು ಗ್ರಾಮದ ನೇರಳ ಕಟ್ಟೆ ನಿವಾಸಿ , ನಾರಾಯಣ ಮತ್ತು ಸಾವಿತ್ರಿ ದಂಪತಿಗಳ ಪುತ್ರ ಮಾಸ್ಟರ್ ಗಗನ್ (12 ವರ್ಷ) ಎಂಬ ಬಾಲಕನ ಚಿಕಿತ್ಸೆಗೆ ಮಂಗಳೂರಿನ ಹಿದಾಯ ಫೌಂಡೇಶನ್ ನೆರವು ನೀಡಿದೆ. ಬಾಲಕನ ಸುಧೀರ್ಘ ಸಮಯದ ಕಾಯಿಲೆಯಿಂದ ಅಪಾರ ಹಣ ಖರ್ಚು ಮಾಡಿ ಆರ್ಥಿಕವಾಗಿ ಕಂಗೆಟ್ಟಿದ್ದ ಕುಟುಂಬವು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಬಾಲಕನನ್ನು ದಾಖಲು ಮಾಡಿತ್ತು. ತಲಾ 37,500/- ರೂಪಾಯಿ ವೆಚ್ಚದ ಮೂರು ಚುಚ್ಚು ಮದ್ದುಗಳನ್ನು ಒಟ್ಟು ರೂಪಾಯಿ 1,12,500/- ವೆಚ್ಚದಲ್ಲಿ ನೀಡಿ ಮಾನವೀಯ ನೆರವು ನೀಡಿದೆ.
ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿನ ಮಕ್ಕಳ ಆರೈಕೆಗೆ ಸಂಬಂಧಿಸಿದಂತೆ ಹಿದಾಯ ಫೌಂಡೇಶನ್ ಸಹಾಯ ಕೇಂದ್ರವನ್ನು ಆರಂಭಿಸಿದ್ದು, ಇದರ ಮೂಲಕ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ. ಹಿದಾಯ ಫೌಂಡೇಶನ್ ಮಂಗಳೂರು ಇದು ಕಳೆದ 8 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿ ವಿಭಿನ್ನ ರೀತಿಯಲ್ಲಿ ತನ್ನ ಸಾರ್ಥಕ ಸೇವೆಯನ್ನು ಮಾಡುತ್ತಿದೆ. ಈಗಾಗಲೇ ಹಲವಾರು ಬಡ ಜನರ ಹಸಿವು ನೀಗಿಸುವ ಸಾರ್ಥಕ ಕಾರ್ಯದಲ್ಲಿ ತೊಡಗಿದ್ದು ಸುಮಾರು 250ಕ್ಕಿಂತಲೂ ಅಧಿಕ ತೀರಾ ಬಡ ಅರ್ಹ ಕುಟುಂಬದವರಿಗೆ ತಿಂಗಳಿಗೆ ಬೇಕಾಗುವಂತಹ ಜಿನಸು (ರೇಶನ್) ಸಾಮಾನುಗಳನ್ನು ಅವರ ಮನೆ ಬಾಗಿಲಿಗೆ ಪ್ರತೀ ತಿಂಗಳೂ ಮುಟ್ಟಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲೂ ತನ್ನ ಕಾರ್ಯಚಟುವಟಿಕೆ ಮುಂದುವರಿಸಿ ಹಲವಾರು ಮೆಡಿಕಲ್ ಕ್ಯಾಂಪ್ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಳ್ಳಿ ಪ್ರದೇಶದಲ್ಲಿ ಹಮ್ಮಿಕೊಂಡು ಬಡ ಕುಟುಂಬದ ತೀರಾ ಅಸಹಾಯಕ ರೋಗಿಗಳಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಹಲವು ರೀತಿಯಲ್ಲಿ ಸಹಕರಿಸಿ ಅಗತ್ಯವಿರುವಲ್ಲಿ ಹಣಕಾಸಿನ ಸಹಾಯವನ್ನು ಹಾಗೂ ಔಷಧಿಯನ್ನು ಖರೀದಿಸಿ ರೋಗಿಗಳಿಗೆ ವಿತರಿಸಿದೆ.
ತುಮಕೂರಿನ ದಾದಾಪೀರ್ ಎಂಬವರ ಪುತ್ರ ಇಬ್ರಾಹಿಂ, ಉತ್ತರ ಕನ್ನಡದ ಸೋಮಯ್ಯ ಎಂಬವರ ಪುತ್ರ ಚಂದ್ರಕಾಂತ್ (13), ತರೀಕೆರೆ ರಾಮಪ್ಪ ಎಂಬವರ 6 ತಿಂಗಳ ಪುತ್ರ ರೋಹಿತ್, ಬೆಳ್ತಂಗಡಿಯ ವಸಂತ್ ಎಂಬವರ ಒಂದೂವರೆ ತಿಂಗಳ ಪ್ರಾಯದ ದೀಕ್ಷಿತ್, ಅಡ್ಯಾರ್ ಕಣ್ಣೂರಿನ ಅಬ್ದುಲ್ ಖಾದರ್ ಎಂಬವರ ಒಂದೂವರೆ ವರ್ಷ ಪ್ರಾಯದ ಪುತ್ರಿ ತಬಸ್ಸುಮ್, ಪುತ್ತೂರಿನ ಸುಂದರ ಎಂಬವರ 6 ವರ್ಷದ ಪುತ್ರ ಪ್ರಜ್ವಲ್, ಬೆಳ್ತಂಗಡಿಯ ಅಬ್ದುಲ್ ರೆಹಮಾನ್ (50 ವರ್ಷ ಪ್ರಾಯ) ಕಾಸರಗೋಡಿನ ನಾರಾಯಣ ಮತ್ತು ಲಾವಣ್ಯ ಎಂಬವರ ಒಂದು ತಿಂಗಳ ಪುತ್ರಿ, ಬಂಟ್ವಾಳದ ವಿಶ್ವನಾಥ ಬಂಗೇರ ದಂಪತಿಯ ಪುತ್ರಿ (2 ತಿಂಗಳು), ಕಾಜೂರಿನ ಅಬ್ದುಲ್ ರೆಹಮಾನ್ ಎಂಬವರ ಪತ್ನಿ 66 ವರ್ಷದ ಮರಿಯಮ್ಮ, ಎನ್.ಆರ್.ಪುರ ಶೃಂಗೇರಿಯ ರಮೇಶ್, ಶಿಲ್ಪ ದಂಪತಿಯ 13 ದಿನದ ಪುತ್ರಿ ಮತ್ತು ಮೂಡಿಗೆರೆಯ ರಾಮ, ಸರೋಜ ದಂಪತಿಯ 13 ವರ್ಷದ ಪುತ್ರಿ ಬೇಬಿ, ಚಿಕ್ಕಮಗಳೂರಿನ ರಾಮಪ್ಪ, ದಾಕ್ಷಾಯಿಣಿ ದಂಪತಿಯ ಪುತ್ರಿ 6 ವರ್ಷ ಪ್ರಾಯದ ಕಾವ್ಯ ಎಂಬ ರೋಗಿಯ ಸಹಿತ ಎಲ್ಲರಿಗೂ ಚಿಕಿತ್ಸಾ ವೆಚ್ಚವನ್ನು ಸಂಸ್ಥೆಯ ವತಿಯಿಂದ ವ್ಯಯಿಸಲಾಗಿದೆ. ಈ ಸೇವಾ ಕಾರ್ಯದಿಂದ ಸರಕಾರಿ ವೆನ್ಲಾಕ್ ಆಸ್ಪತ್ರೆಯ D.M.O. ಸಹಿತ ಹಲವು ವೈದ್ಯರಿಂದ ಶ್ಲಾಘನೆ ವ್ಯಕ್ತವಾಗಿದೆ.







