ಥಾಯ್ಲೆಂಡ್ ಮಾಸ್ಟರ್ಸ್ ಫೈನಲ್‌ನಲ್ಲಿ ಸೈನಾಗೆ ರಚನಾಕ್ ಸವಾಲು ನಿರೀಕ್ಷೆ

ಹೊಸದಿಲ್ಲಿ, ಜ.21: ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ ಸೈನಾ ನೆಹ್ವಾಲ್ ಅವರು ಮುಂಬರುವ ಥಾಯ್ಲೆಂಡ್ ಮಾಸ್ಟರ್ಸ್ ಟೂರ್ನಿಯ ಫೈನಲ್‌ನಲ್ಲಿ ಮಾಜಿ ವಿಶ್ವಚಾಂಪಿಯನ್ ರಚನಾಕ್ ಇಂತನಾನ್ ಸವಾಲು ನಿರೀಕ್ಷಿಸಲಾಗಿದೆ.
ಬ್ಯಾಂಕಾಕ್‌ನಲ್ಲಿ ಫೆಬ್ರವರಿ 8ರಿಂದ 13ರ ತನಕ ನಡೆಯಲಿರುವ ಈ ಟೂರ್ನಿಯಲ್ಲಿ ಆಡುವ ಮೂಲಕ ಸೈನಾ 2016ರಲ್ಲಿ ಬ್ಯಾಡ್ಮಿಂಟನ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ಸೈಯದ್ ಮೋದಿ ಗ್ರಾನ್ ಪ್ರಿ ಚಾಂಪಿಯನ್ ವರ್ಲ್ಡ್ ನಂ.2 ಸೈನಾ ಅವರು ಥಾಯ್ಲೆಂಡ್ ಓಪನ್‌ನಲ್ಲಿ ಗೆಲುವಿನೊಂದಿಗೆ 2016ರ ಒಲಿಂಪಿಕ್ಸ್ ತೇರ್ಗಡೆಗೆ ಅಂಕಗಳನ್ನು ಸಂಪಾದಿಸುವ ಯೋಜನೆಯಲ್ಲಿದ್ದಾರೆ.
ಸೈನಾ ಮೊದಲ ಪಂದ್ಯದಲ್ಲಿ ಸಿಂಗಾಪುರದ ಜಿಯಾಯನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಆರನೆ ಶ್ರೇಯಾಂಕದ ಒಂಗುಮ್ರುಗ್‌ಫಾನ್ ಕ್ವಾರ್ಟರ್ ಪೈನಲ್‌ನಲ್ಲಿ ಎದುರಾಗುವ ಸಾಧ್ಯತೆ ಇದೆ.
ಸೆಮಿಪೈನಲ್‌ನಲ್ಲಿ ಚೀನಾದ ನಂ.11 ಸುನ್ ಯು ಮುಖಾಮುಖಿಯಾಗಲಿರುವ ಸಾಧ್ಯತೆ ಇದೆ. ಸುನ್ ಯು ವಿರುದ್ಧ 2013ರ ಚೀನಾ ಓಪನ್‌ನಲ್ಲಿ ಸೈನಾ ಸೋಲು ಅನುಭವಿಸಿದ್ದರು. ಸ್ಥಳೀಯ ಆಟಗಾರ್ತಿ ರಚನಾಕ್ ಅವರಿಗೆ ಫೈನಲ್ ದಾರಿ ಸುಲಭವಾಗಿದೆ. ಕ್ವಾರ್ಟರ್ ಫೈನಲ್‌ನಲ್ಲಿ ನಿಕ್ಕಾನ್ ಜಿಂಡಾಪೊಲ್ , ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ನಂ.8 ಸುಂಗ್ ಜಿ-ಹ್ಯೂನ್ ಸವಾಲು ಎದುರಾಗಲಿದೆ.
ಸುಂಗ್ ಅವರು ಭಾರತದ ಸೈಲಿ ರಾಣೆ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.
ಸೈನಾ ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿ ಇಲ್ಲ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ಬಳಿಕ ಅವರು ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಇತ್ತೀಚೆಗೆ ಕೊನೆಗೊಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಅವಾಧ್ ವಾರಿಯರ್ಸ್ ಪರ ಕೆಲವೇ ಪಂದ್ಯಗಳಲ್ಲಿ ಆಡಿದ್ದರು. ಭಾರತದ ತಾನ್ವೀ ಲಾಡ್ ಅವರು ಅಮೆರಿಕದ ರಾಂಗ್ ಸ್ಕ್ಕಾಫೆರ್ ಅವರನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಕಾಮನ್‌ವೆಲ್ತ್ ಚಾಂಪಿಯನ್ ಪಿ. ಕಶ್ಯಪ್ ಅವರು ಕೊರಿಯಾದ ಕ್ವಾಂಗ್ ಹೀ ಹೆವೊರನ್ನು, ಆನಂದ್ ಪವಾರ್‌ಗೆ ಥಾಯ್ಲೆಂಡ್‌ನ ತವಾನ್ ಹುಯಾನ್‌ಸೂರ್ಯ, ಸಮೀರ್ ವರ್ಮಗೆ ಹಷೇಲ್ ಡ್ಯಾನಿ ಸವಾಲು ಎದುರಾಗಲಿದೆ.







