‘ಫಸಲು ಬಿಮಾ ಬೆಳೆ ಯೋಜನೆ ರೈತರಿಗೆ ಅನುಕೂಲಕರ’
ಹಾಸನ, ಜ.21: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈತರ ಅನುಕೂಲಕ್ಕಾಗಿ ಕೇಂದ್ರದಿಂದ ಪಸಲು ಬಿಮಾ ಬೆಳೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಾವಗಲ್ ಚಂದ್ರಶೇಖರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ದೇಶದಲ್ಲಿ ರೈತರು ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪ್ರಕೃತಿ ವಿಕೋಪ ಮತ್ತು ಮಾರುಕಟ್ಟೆ ದರಗಳ ಕುಸಿತದಿಂದ ಪದೇ ಪದೇ ರೈತರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ರೈತಾಪಿ ವರ್ಗದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಲ್ಲಿ ಫಸಲು ಬಿಮಾ ಬೆಳೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.
ಈ ಯೋಜನೆ ಕಟ್ಟಕಡೆಯ ರೈತನಿಗೂ ಸಹ ಸಿಗುವ ವಿಮೆಯಾ ಗಿದೆ. ಮುಂದಿನ ಮುಂಗಾರು ಪ್ರಾರಂಭದಲ್ಲಿ ರೈತರು ಈ ಬೆಳೆ ವಿಮೆ ನೀತಿ ತೆಗೆದುಕೊಂಡು ಪ್ರಯೋಜನ ಪಡೆಯಬಹುದು. ಸಾವಯವ ಗೊಬ್ಬರ ಉತ್ಪಾದನೆ ಮಾಡುವ ರೈತರಿಗೆ ಧನ ಸಹಾಯ ನೆರವು ನೀಡಲು ಕೇಂದ್ರ ಸರಕಾರ ಮುಂದಾಗಿದೆ ಎಂದ ಅವರು ಫಸಲು ಬಿಮಾ ಬೆಳೆ ಯೋಜನೆ ಜಾರಿಗೆ ತಂದಿರುವುದಕ್ಕಾಗಿ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ರೇಣುಕುಮಾರ್, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಗೌಡ, ಕದಾಳ್ ಕೆ.ಆರ್. ಲೋಕೇಶ್, ಎಸ್ಸಿ-ಎಸ್ಟಿ ಮೋರ್ಚಾ ಅಧ್ಯಕ್ಷ ಪರ್ವತಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.





