ಬಿಸಿಯೂಟ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥ ಶಾಲೆಗೆ ಅಧಿಕಾರಿಗಳ ತಂಡ ಭೇಟಿ

ಬಿಸಿಯೂಟ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥ ಶಾಲೆಗೆ ಅಧಿಕಾರಿಗಳ ತಂಡ ಭೇಟಿ
ಸಿಬ್ಬಂದಿ ಶಿಕ್ಷಕರ ತರಾಟೆ
ಬಾಗೇಪಲ್ಲಿ, ಜ.21: ಮಧ್ಯಾಹ್ನದ ವಿಷಪೂರಿತ ಬಿಸಿಯೂಟ ಸೇವನೆ ಮಾಡಿದ 70 ಕ್ಕೂ ಹೆಚ್ಚು ಮಕ್ಕಳು ಬುಧವಾರ ಅಸ್ವಸ್ಥರಾಗಿರುವ ಹಿನ್ನ್ನೆಲೆಯಲ್ಲಿ ಇಂದು ತಾಲೂಕು ಮಟ್ಟದ ಅಧಿಕಾರಿಗಳ ತಂಡ ಚೆನ್ನರಾಯನ ಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಶಾಲೆಯ ಶಿಕ್ಷಕಿಯರು ಮತ್ತು ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ವಿಷಪೂರಿತ ಆಹಾರ ಸೇವನೆಯಿಂದ ಬಹುತೇಕ ಮಕ್ಕಳು ಅಸ್ವಸ್ಥರಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎಂದಿನಂತೆ ಇಂದು ಬೆಳಗ್ಗೆ ಶಾಲೆಗೆ ಹಾಜರಾಗಿದ್ದರು. ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರೆಲ್ಲರೂ ಶಾಲೆಯ ಕಡೆ ಧಾವಿಸಿ ಎಸ್‌ಡಿಎಂಸಿ ಸಮಿತಿಯನ್ನು ಕೂಡಲೇ ಬದಲಾವಣೆ ಮಾಡಬೇಕು, ಇಲ್ಲಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯನ್ನು ಸಹ ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದರು.ದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಎಂ.ನಾಗರಾಜ್ ಮತ್ತು ತಾಪಂ ಇಒ ರಾಜಣ್ಣ, ಚುನಾವಣಾ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಡುಗೆ ಸಿಬ್ಬಂದಿಯನ್ನು ಮತ್ತು ಎಸ್‌ಡಿಎಂಸಿ ಸಿಬ್ಬಂದಿಯನ್ನು ಸದ್ಯಕ್ಕೆ ಬದಲಾಯಿಸಲು ಸಾಧ್ಯವಿಲ್ಲ. ಚುನಾವಣೆ ಮುಗಿದ ನಂತರ ನಿಯಮಾನುಸಾರ ಸಮಿತಿಯನ್ನು ಬದಲಾವಣೆ ಮಾಡಲು ಶಿಫಾರಸು ಮಾಡುವುದಾಗಿ ತಿಳಿಸಿದಾಗ ಪಟ್ಟು ಬಿಡದ ಗ್ರಾಮಸ್ಥರು, ಶಾಲೆಯ ಬಿಸಿಯೂಟವನ್ನು ನಮ್ಮ ಮಕ್ಕಳಿಗೆ ಬಡಿಸಬೇಡಿ ಎಂದು ಅಧಿಕಾರಿಗಳಿಗೆ ಆಕ್ರೋಶ ವ್ಯಕ್ತಪಡಿಸಿದರು. ದಕ್ಕೆ ಉತ್ತರಿಸಿದ ಅಧಿಕಾರಿಗಳು, ಬಿಸಿಯೂಟದಲ್ಲಿ ವಿಷಯುಕ್ತ ಆಹಾರ ಬೆರೆತು ಹೋಗಿರುವುದು ದುರದೃಷ್ಟಕರ ಇನ್ನು ಮುಂದೆ ಈ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳುವ ಹೊಣೆ ನಮ್ಮ ಮೇಲಿದೆ ಎಂದು ಹೇಳಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಎಂ.ನಾಗರಾಜ್ ಶಾಲೆಯ ಪಕ್ಕದಲ್ಲಿರುವ ಔಷಧ ಸಿಂಪಡಿಸಿದ ಸೌತೆಕಾಯಿಗಳನ್ನು ಪದಾರ್ಥಕ್ಕೆ ಬಳಸಿದ್ದರಿಂದ ಅಹಿತಕರ ಘಟನೆ ನಡೆದಿದೆ ಎಂದರು. ಆದರೆ ಈ ಘಟನೆಗೆ ಕಾರಣರಾದವರ ಮೇಲೆ ಏನು ಕ್ರಮ ಜರಗಿಸುತ್ತೀರ ಎಂಬ ಸುದ್ದಿಗಾರರ ಪ್ರಶ್ನೆಗೆ ಇಲ್ಲಿನ ಶಿಕ್ಷಕಿಯರು ಮತ್ತು ಅಡುಗೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದೇನೆಂದು ಉತ್ತರಿಸಿದರು.ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಆದಿಲಕ್ಷ್ಮಮ್ಮ, ಕ್ರೈಂ ಸಬ್ ಇನ್‌ಸ್ಪೆಕ್ಟರ್ ಪೆದ್ದ ನರಸಿಂಹಯ್ಯ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪಿ.ವೆಂಕಟರವಣಪ್ಪ ಉಪಾಧ್ಯಕ್ಷ ಸಿ.ವೆಂಕಟರಾಯಪ್ಪ, ದೈಹಿಕ ಶಿಕ್ಷಕ ಸಂಯೋಜಕ ಬಿ.ಎನ್.ನಟರಾಜ್, ಗ್ರಾಮದ ಮುಖಂಡ ನಾಗರಾಜ್, ಗೂಳೂರು ಹೊರ ಠಾಣೆಯ ಮುಖ್ಯಪೇದೆ ಎನ್.ರಾಜು ಮತ್ತಿತರರು ಉಪಸ್ಥಿತರಿದ್ದರು.





