ಮೂಡ್ಲಕಟ್ಟೆ: ಪದವಿ ಕಾಲೇಜುಮಟ್ಟದ ವಾಲಿಬಾಲ್ ಪಂದ್ಯಾವಳಿ ಆಳ್ವಾಸ್, ಬೆಸೆಂಟ್ ಕಾಲೇಜುಗಳಿಗೆ ಅಗ್ರ ಪ್ರಶಸ್ತಿ

ಕುಂದಾಪುರ, ಜ.21: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂಬಿಎ ಸ್ನಾತಕೋತ್ತರ ಪದವಿ ವಿಭಾಗದ ಆಶ್ರಯದಲ್ಲಿ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ನಡೆದ ಮಂಗಳೂರು ವಿವಿ ಪದವಿ ಕಾಲೇಜುಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಹಾಗೂ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜು ತಂಡಗಳು ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗದ ಅಗ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ.
ಉಡುಪಿ ಹಾಗೂ ದ.ಕ. ಜಿಲ್ಲೆಗಳ 26ಪದವಿ ಕಾಲೇಜುಗಳು ಪಾಲ್ಗೊಂಡಿದ್ದ ಈ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಬಸ್ರೂರಿನ ಶಾರದಾ ಕಾಲೇಜು ರನ್ನರ್ ಅಪ್ ಸ್ಥಾನ ಗಳಿಸಿದರೆ, ಮಹಿಳಾ ವಿಭಾಗದಲ್ಲಿ ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜು ದ್ವಿತೀಯ ಸ್ಥಾನಿಯಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಸ್ರೂರು ಶಾರದಾಕಾಲೇಜಿನ ಪ್ರಾಂಶುಪಾಲ ಪ್ರೊ.ರಾಧಾಕೃಷ್ಣ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮೂಡ್ಲಕಟ್ಟೆ ತಾಂತ್ರಿಕ ಕಾಲೇಜಿನ ಅಧ್ಯಕ್ಷ ಸಿದ್ಧಾರ್ಥ ಶೆಟ್ಟಿ ಹಾಗೂ ಪ್ರಾಂಶುಪಾಲೆ ಡಾ.ಶುಭಾಪಿ.ಭಟ್, ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಬಿಎ ಮುಖ್ಯಸ್ಥೆ ಪ್ರೊ.ಸೀಮಾ ಸಕ್ಸೇನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಪಂದ್ಯಾವಳಿ ಯನ್ನು ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಅನುಪ್ ಡಿ. ಕ್ರಾಸ್ತಾ ಉದ್ಘಾಟಿಸಿದರು. ಮಂಗಳೂರು ವಿವಿ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೇಶವ ಮೂರ್ತಿ, ಪ್ರೊ.ಪದ್ಮಶ್ರೀ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.





