12ನೆ ಶತಮಾನ ಯುಗಪರಿವರ್ತನೆಯ ಸುವರ್ಣ ಕಾಲ: ಡಿಸಿ ವೆಂಕಟೇಶ್

ಚಿಕ್ಕಬಳ್ಳಾಪುರ: ಅಂಬಿಗರ ಚೌಡಯ್ಯ ದಿನಾಚರಣೆ
ಚಿಕ್ಕಬಳ್ಳಾಪುರ, ಜ.21: ಅಸ್ಪಶ್ಯತೆ, ಮೌಢ್ಯತೆ, ಜಾತೀಯತೆ, ಮೇಲು ಕೀಳು, ಆಡಂಬರ ಹಾಗೂ ಲಿಂಗ ತಾರತಮ್ಯ ಸೇರಿದಂತೆ ಇನ್ನಿತರೆ ಸಮಾಜ ಘಾತುಕ ಶಕ್ತಿಗಳ ವಿರುದ್ಧ ವಚನ ಸಾಹಿತ್ಯದ ಮೂಲಕ ಸುಸ್ತಿರ ಸಮಾಜ ನಿರ್ಮಾಣದಲ್ಲಿ ಶ್ರಮಿಸಿದ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸಲಹೆ ನೀಡಿದರು. ನಗರದ ಶ್ರೀದೇವಿ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿ 12ನೆ ಶತಮಾನವು ಯುಗಪರಿವರ್ತನೆಯ ಸುವರ್ಣ ಕಾಲವಾಗಿದ್ದು, ಸಮಾಜದ ಅಂಕು ಡೊಂಕು ತಿದ್ದಲು ಬಸವಣ್ಣ, ಜೇಡರ ದಾಸಿಮಯ್ಯ, ಅಲ್ಲಮಪ್ರಭು, ಸಿದ್ದರಾಮೇಶ್ವರ ಹಾಗೂ ಅಂಬಿಗರ ಚೌಡಯ್ಯರಂತಹ ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ವಿಶಿಷ್ಟತೆ ಕೊಡುಗೆ ನೀಡಿದ್ದಾರೆ ಎಂದರು.
ಶ್ರೇಣೀಕೃತ ಸಮಾಜದಲ್ಲಿನ ಜಾತಿ, ಮತ, ಭೆೇದ ಭಾವಗಳನ್ನು ಮೆಟ್ಟಿ ನಿಂತ ಅಂಬಿಗರ ಚೌಡಯ್ಯನವರು, ಅಚ್ಚಕನ್ನಡದಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವ ವಚನಗಳನ್ನು ರಚನೆ ಮಾಡಿದ್ದು, ಮಾನವ ಕುಲಕ್ಕೆ ಬೇಕಾದ ಹಸಿವು, ವಸ್ತ್ರ, ವಸತಿ, ಔಷಧದ ಜೊತೆಗೆ ಅರಿವು ಮುಖ್ಯ ಎಂದು ಸಾರಿದರು. ಪರಿಪೂರ್ಣ ಜೀವನ ನಡೆಸಲು ಮಾನವ ಕುಲಕ್ಕೆ ವಚನ ಸಾಹಿತ್ಯದಲ್ಲಿ ಸಾಕಷ್ಟು ಪೂರಕ ಅಂಶಗಳಿದ್ದು, ವಚನ ಸಾಹಿತ್ಯ ಹಾಗೂ ಅದರಲ್ಲಿನ ತಾತ್ಪರ್ಯವನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣದಿಂದ ಮಾತ್ರವೇ ಅರಿವು ದಕ್ಕಿಸಿಕೊಳ್ಳಲು ಸಾಧ್ಯ ಎಂಬ ತಾತ್ಪರ್ಯವನ್ನು ಸಾರಿದ ಚೌಡಯ್ಯನವರ ತತ್ವ ಸಿದ್ಧಾಂತ ಪಾಲನೆಯೊಂದಿಗೆ, ಜನಾಂಗದಲ್ಲಿನ ಪ್ರತಿಯೊಬ್ಬರು ಮೌಲ್ಯಾಧಾರಿತ ಶಿಕ್ಷಣವನ್ನು ಪಡೆಯುವ ಮೂಲಕ ಸದೃಢ ದೇಶ ಕಟ್ಟಲು ಸಕಾರಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸರಕಾರಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಕೋಡಿರಂಗಪ್ಪ ಮಾತನಾಡಿ, 12-13 ಶತಮಾನವು ವಚನ ಸಾಹಿತ್ಯವು ಇತಿಹಾಸದ ಪರ್ವದ ಕಾಲವಾಗಿದ್ದು, ವಚನ ಸಾಹಿತ್ಯಕ್ಕೆ ತತ್ವಜ್ಞ್ಞಾನ, ಜೀವನದ ಸಾರ ಹಾಗೂ ವೌಲ್ಯಗಳ ಆಗರವಾಗಿರುವ ಅಂಬಿಗರ ಚೌಡಯ್ಯನವರ ಕೊಡುಗೆ ಅಪಾರವಾಗಿದೆ. ಅವರು ಕಾಯಕ ಪ್ರವೃತ್ತಿಯಲ್ಲಿಯೇ ಏಳಿಗೆ ಅಡಗಿದೆ ಎಂದು ಬೋಧನೆಯೊಂದಿಗೆ ಪಾಲಿಸಿದ ವ್ಯಕ್ತಿಯಾಗಿದ್ದರು ಎಂದು ಅಭಿಪ್ರಾಯಪಟ್ಟರು.
ಸರಕಾರದ ಮಟ್ಟದಲ್ಲಿ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಸೌಲಭ್ಯಗಳ ಸೂಕ್ತ ಸದ್ಬಳಕೆಗೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಸಮುದಾಯದ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಸಂದರ್ಭದಲ್ಲಿ ಜಿಪಂ ಸಿಇಒ ಬಿ.ಬಿ. ಕಾವೇರಿ, ಉಪವಿಭಾಗಾಧಿಕಾರಿ ಅಮರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಟಾಚಲಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಸುರೇಖಾ ವಿಜಯಪ್ರಕಾಶ್, ತಹಶೀಲ್ದಾರ್ ಜಗದೀಶ್, ಬೆಸ್ತ ಸಮುದಾಯದ ಜಿಲ್ಲಾಧ್ಯಕ್ಷ ಕೆ.ಜಯರಾಮ್, ತಾಲೂಕು ಅಧ್ಯಕ್ಷ ಆರ್.ಎ. ರವಿಕುಮಾರ್, ಅಪ್ಪಾಲಪ್ಪ, ಕೃಷ್ಣಮೂರ್ತಿ, ರಮೇಶ್, ಲಕ್ಷ್ಮೀ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.





