ರೋಹಿತ್ ವೇಮುಲಾ ಸಾವಿನಲ್ಲಿ ದಲಿತ ಸಂಘಟನೆಗಳ ಪಾಲೆಷ್ಟು?
ದಲಿತರಿಗೆ ನ್ಯಾಯ ಸಿಗಬೇಕಾದರೆ ಅದಕ್ಕೆ ಅತ್ಯಂತ ದುಬಾರಿಯಾದ ಶುಲ್ಕವನ್ನು ತೆರಬೇಕು ಎನ್ನುವುದು ಹೈದರಾಬಾದ್ ವಿ.ವಿ. ಪ್ರಕರಣದಲ್ಲಿ ಸಾಬೀತಾಗಿದೆ. ಕೊನೆಗೂ ಉಳಿದ ನಾಲ್ವರು ಸಂಶೋಧನಾ ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕಿದೆ. ನ್ಯಾಯ ಸಿಕ್ಕಿದೆ ಎನ್ನುವುದಕ್ಕಿಂತ, ಅನ್ಯಾಯದಿಂದ ಬಿಡುಗಡೆ ಸಿಕ್ಕಿದೆ. ಅಂದರೆ ವಜಾ ಆಗಿರುವ ಅವರನ್ನು ವಿಶ್ವವಿದ್ಯಾನಿಲಯ ಮರಳಿ ಸೇರಿಸಿಕೊಂಡಿದೆ. ವಜಾ ಹಿಂಪಡೆಯುವುದು ಅವರಿಗೆ ಸಿಕ್ಕಿದ ನ್ಯಾಯ ಎಂದು ನಾವು ಸಂಭ್ರಮ ಪಟ್ಟರೆ ಅದು ನಮ್ಮ ಮೂರ್ಖತನವಾಗುತ್ತದೆ. ಈವರೆಗೆ ಆದ ಅನ್ಯಾಯದಿಂದ ಅವರಿಗೆ ಮುಕ್ತಿ ಸಿಕ್ಕಿದೆ. ಆದರೆ ನ್ಯಾಯ ಸಿಗಬೇಕಾದರೆ, ಅವರ ಮೇಲಾದ ಅನ್ಯಾಯಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕಾಗಿದೆ. ತಮ್ಮೆಳಗೊಬ್ಬನನ್ನು ಬಲಿಕೊಟ್ಟು ಈ ನಾಲ್ವರು ಅನ್ಯಾಯದಿಂದ ಪಾರಾಗಿದ್ದಾರೆ. ಇವರ ವಜಾ ಹಿಂಪಡೆದುದರಿಂದ, ರೋಹಿತ್ ವಾಪಸಾಗುವುದಿಲ್ಲ. ಅವನ ಕನಸುಗಳು ಮತ್ತೆ ಜೀವ ತಳೆಯುವುದಿಲ್ಲ. ಅಥವಾ ಅವನಿಗೆ ನ್ಯಾಯ ಸಿಕ್ಕಿದಂತಾಗುವುದಿಲ್ಲ. ರೋಹಿತ್ ಆತ್ಮಹತ್ಯೆ ಮಾಡಿಕೊಂಡ ಮೂರೇ ದಿನಗಳಲ್ಲಿ ಉಳಿದ ದಲಿತರನ್ನು ವಿಶ್ವ ವಿದ್ಯಾನಿಲಯ ವಾಪಸ್ ಕರೆಸಿಕೊಂಡಿತು. ಹಲವು ತಿಂಗಳುಗಳಿಂದ ಸಾಧ್ಯವಾಗದೇ ಇರುವುದು ಬರೇ ಮೂರು ದಿನಗಳಲ್ಲಿ ಮಾಡಲು ವಿಶ್ವವಿದ್ಯಾನಿಲಯಕ್ಕೆ ಹೇಗೆ ಸಾಧ್ಯವಾಯಿತು? ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡ ಬೆನ್ನಿಗೇ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಜಾತೀಯತೆ ಇಡೀ ದೇಶದ ಗಮನ ಸೆಳೆಯಿತು. ಬಹುಶಃ ಈ ಬಲಿ ನಡೆಯದೇ ಇದ್ದಿದ್ದರೆ ದೇಶ ಇವರ ಸಮಸ್ಯೆಯ ಬಗ್ಗೆ ಎಚ್ಚೆತ್ತುಕೊಳ್ಳುತ್ತಲೇ ಇರುತ್ತಿರಲಿಲ್ಲವೇನೋ? ಅವನ ಸಾವು ಸಂಭವಿಸುವವರೆಗೂ ದೇಶದ ಇತರ ರಾಜಕೀಯ ಪಕ್ಷಗಳು ಈ ಕಡೆಗೆ ತಲೆ ಹಾಕಿರಲಿಲ್ಲ. ಕನಿಷ್ಠ ದೇಶದ ದಲಿತ ಸಂಘಟನೆಗಳಾದರೂ ಒಂದಾಗಿ, ರೋಹಿತ್‌ನ ಧ್ವನಿಗೆ ಧ್ವನಿ ಸೇರಿಸಿದ್ದರೆ ಆತ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಅಂಬೇಡ್ಕರ್‌ರ ಪ್ರತಿಮೆಗಳಿಗೆ ಸಣ್ಣದೊಂದು ಹಾನಿಯಾದರೂ ಬೀದಿಗಿಳಿಯುವ ದಲಿತ ಸಂಘಟನೆಗಳು, ತಮ್ಮದೇ ಸಮುದಾಯದ ವಿದ್ಯಾರ್ಥಿಗಳು ಹೈದರಾಬಾದ್ ವಿವಿಯಲ್ಲಿ ಅನ್ಯಾಯಕ್ಕೊಳಗಾಗಿ ಬೀದಿಗೆ ಬಿದ್ದಾಗ ಅವನ ಜೊತೆ ನಿಲ್ಲಲು ಮುಂದಾಗಲಿಲ್ಲ್ಲ. ಹೈದರಾಬಾದ್ ವಿವಿಯಲ್ಲಿ ಸಂಘಪರಿವಾರದ ಜೊತೆಗೆ ಕೇಂದ್ರ ಸಚಿವರಿದ್ದರು. ಈ ಹುಡುಗರ ಜೊತೆಗೆ ಸರಕಾರ ಬಿಡಿ, ತನ್ನವರೇ ಇದ್ದಿರಲಿಲ್ಲ. ಇದು ರೋಹಿತ್‌ನನ್ನು ತೀವ್ರವಾಗಿ ಕಾಡಿತ್ತು. ತನ್ನ ಹೋರಾಟ ಒಂಟಿ ಹೋರಾಟ ಎಂದು ಅವನಿಗೆ ಕೊನೆಯ ಗಳಿಗೆಯಲ್ಲಿ ಅನ್ನಿಸಿತ್ತು. ಇದು ಅವನನ್ನು ಹತಾಶೆಗೆ ತಳ್ಳಿತ್ತು. ಇಂದು ರೋಹಿತ್ ಆತ್ಮಹತ್ಯೆಗೆ ಕೇವಲ ಬಿಜೆಪಿ ಮತ್ತು ಸಂಘಪರಿವಾರವನ್ನು ದೂರಿದರೆ ಅದು ನಮ್ಮ ಆಷಾಢಭೂತಿತನವಾಗುತ್ತದೆ. ರೋಹಿತ್ ಅಸಹಾಯಕ ಸ್ಥಿತಿಯಲ್ಲಿದ್ದಾಗ ಅವನ ಜೊತೆ ನಿಲ್ಲದ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳೂ ಆತನ ಆತ್ಮಹತ್ಯೆಯ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ರೋಹಿತ್‌ನ ಪರವಾಗಿ ಇಂದು ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿರುವ ರಾಜಕಾರಣಿಗಳು, ಆತ ವಿಶ್ವವಿದ್ಯಾನಿಲಯದ ಬಯಲಲ್ಲಿ ಸತ್ಯಾಗ್ರಹ ಮಾಡುತ್ತಿರುವಾಗ ಬಂದಿದ್ದರೆ ಕನಿಷ್ಠ ಒಂದು ಪ್ರತಿಭಾವಂತ ಜೀವ ಉಳಿದು ಬಿಡುತ್ತಿತ್ತು. ದೇಶದ ಇಡೀ ದಲಿತ ಸಮುದಾಯವೇ ಇದೀಗ ಕೇಂದ್ರ ಸರಕಾರದ ಮೇಲೆ ಮುಗಿ ಬಿದ್ದಿರುವುದರಿಂದ ಮತ್ತು ದಲಿತ ಸಂಘಟನೆಗಳೆಲ್ಲ ಜೀವ ಪಡೆದು ಬೀದಿಗಿಳಿದಿರುವುದರಿಂದ ಕಳೆದ ಒಂದು ವರ್ಷದಲ್ಲಿ ಸಾಧ್ಯವಾಗದ್ದು ಮೂರೇ ದಿನಗಳಲ್ಲಿ ಸಾಧ್ಯವಾಗಿದೆ. ನಾಲ್ವರು ವಿದ್ಯಾರ್ಥಿಗಳ ಅಮಾನತನ್ನು ವಿಶ್ವವಿದ್ಯಾನಿಲಯ ಹಿಂದೆಗೆದುಕೊಂಡಿದೆ. ಅಂದರೆ ಸರಕಾರ ನ್ಯಾಯ ಕೊಡುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿರುವುದರಲ್ಲ. ದೇಶಾದ್ಯಂತ ದಲಿತ ಸಂಘಟನೆಗಳು ಬೀದಿಗಿಳಿದಿರುವುದರಿಂದ ಹೆದರಿ ದಲಿತ ವಿದ್ಯಾರ್ಥಿಗಳ ವಜಾವನ್ನು ಹಿಂದೆಗೆದುಕೊಂಡಿದೆ. ಹಾಗಾದರೆ, ನಿಜವಾಗಿಯೂ ತಪ್ಪು ನಡೆದಿರುವುದು ದಲಿತ ಸಂಘಟನೆಗಳಿಂದಲ್ಲವೇ? ಈವರೆಗೆ ಅವುಗಳು ನಿಷ್ಕ್ರಿಯವಾಗಿದ್ದುದರಿಂದ, ವಿಶ್ವವಿದ್ಯಾನಿಲಯದ ಸಂಘಪರಿವಾರ ಮನಸ್ಥಿತಿಯ ಅಧಿಕಾರಿಗಳು ದಲಿತ ವಿದ್ಯಾರ್ಥಿಗಳನ್ನು ಬೀದಿ ಪಾಲು ಮಾಡಿದರು. ಎಲ್ಲಿಯವರೆಗೆ ದಲಿತ ಸಂಘಟನೆಗಳು ನಿಷ್ಕ್ರಿಯವಾಗಿರುತ್ತದೆಯೋ ಅಲ್ಲಿಯವರೆಗೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ರೋಹಿತ್ ಹೆಸರಿನಲ್ಲಿ ಎದ್ದ ದಲಿತ ಸಂಘಟನೆಗಳು ಮತ್ತೆ ಮಲಗಿದರೆ, ಇನ್ನಷ್ಟು ರೋಹಿತರು ಪ್ರಾಣ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಉಳಿದ ನಾಲ್ವರು ವಿದ್ಯಾರ್ಥಿಗಳ ವಜಾ ಹಿಂದೆಗೆದುಕೊಂಡಾಕ್ಷಣ ನ್ಯಾಯ ಸಿಕ್ಕಂತಾಗುವುದಿಲ್ಲ. ರೋಹಿತ್ ಸಾವಿಗೆ ನ್ಯಾಯ ಸಿಗಬೇಕಾದರೆ, ಆತನ ಸಾವಿಗೆ ನೇರ ಕಾರಣರಾಗಿರುವ ಉಪಕುಲಪತಿ, ಕೇಂದ್ರ ಸಚಿವರಿಗೆ ಶಿಕ್ಷೆಯಾಗಬೇಕು. ಕಾಲೇಜಿನಲ್ಲಿ ಜಾತಿ ಮತ್ತು ಕೋಮು ರಾಜಕೀಯವನ್ನು ತಂದು ವಿಶ್ವವಿದ್ಯಾನಿಲಯದ ಪರಿಸರವನ್ನು ಹೊಲಸು ಮಾಡಿರುವ ಸಂಘಪರಿವಾರ ಮನಸ್ಥಿತಿಯ ಉಪಕುಲಪತಿ ಮತ್ತು ತನ್ನ ರಾಜಕೀಯ ಬಲವನ್ನು ಪ್ರದರ್ಶಿಸಿ ರೋಹಿತ್ ಸಾವಿಗೆ ಕಾರಣರಾಗಿರುವ ಕೇಂದ್ರ ಸಚಿವರಿಗೆ ಶಿಕ್ಷೆಯಾಗಲೇಬೇಕು. ಮುಖ್ಯವಾಗಿ ಕೇಂದ್ರ ಸಚಿವ ಬಂಡಾರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹಾಗೆಯೇ ರೋಹಿತ್‌ನನ್ನು ಬೀದಿಗೆ ತಳ್ಳುವಲ್ಲಿ ವಿಶ್ವವಿದ್ಯಾನಿಲಯದ ಯಾರೆಲ್ಲ ಕಾರಣರಾಗಿದ್ದಾರೆಯೋ ಅವರೆಲ್ಲರಿಗೂ ಶಿಕ್ಷೆಯಾಗಬೇಕು. ಆಗ ಮಾತ್ರ ಇಂತಹ ಇನ್ನೊಂದು ಪ್ರಕರಣ ಘಟಿಸದೇ ಇರಲು ಸಾಧ್ಯ.
ಇದೇ ಸಂದರ್ಭದಲ್ಲಿ, ಒಬ್ಬ ದಲಿತನಿಗೆ ಅನ್ಯಾಯವಾದಾಗ, ಉಳಿದೆಲ್ಲ ಪ್ರಗತಿಪರ ಮತ್ತು ದಲಿತ ಸಂಘಟನೆಗಳು ಅವನ ಜೊತೆಗೆ ನಿಲ್ಲುವ ದೊಡ್ಡ ಮನಸ್ಸನ್ನು ಇನ್ನಾದರೂ ಹೊಂದಬೇಕಾಗಿದೆ. ಅನ್ಯಾಯಕ್ಕೊಳಗಾದವನು ಯಾವ ಸಂಘಟನೆಗೆ ಸೇರಿದಾತ, ಯಾವ ಪಕ್ಷಕ್ಕೆ ಸೇರಿದಾತ ಎನ್ನುವುದನ್ನೆಲ್ಲ ಬದಿಗಿಟ್ಟು ವಿಶಾಲ ಮನಸ್ಸಿನಿಂದ ಒಂದಾಗುವ ಸಮಯ ಬಂದಿದೆ. ರೋಹಿತ್‌ನ ಬಲಿದಾನ ವ್ಯರ್ಥವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಅದುವೇ ನಾವು ಅವನಿಗೆ ಸಲ್ಲಿಸಬಹುದಾದ ಅತ್ಯುತ್ತಮ ಶ್ರದ್ಧಾಂಜಲಿಯಾಗಿದೆ.





