2015 ಆಧುನಿಕ ಜಗತ್ತಿನ ಅತ್ಯಂತ ಬಿಸಿಯ ವರ್ಷ
ಮಯಾಮಿ, ಜ. 21: 2015 ಆಧುನಿಕ ಕಾಲದ ಇತಿಹಾಸದಲ್ಲೇ ಅತ್ಯಂತ ಬಿಸಿಯ ವರ್ಷವಾಗಿ ದಾಖಲಾಗಿದೆ ಹಾಗೂ ಈ ಹಿಂದಿನ 2014ರ ದಾಖಲೆಯನ್ನು ಭಾರೀ ಅಂತರದಿಂದ ಮುರಿದಿದೆ.
1880ರ ಬಳಿಕ ಕಳೆದ ವರ್ಷ ಉಷ್ಣತೆಯು ಭೂಮಿಯನ್ನು ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಆವರಿಸಿತ್ತು ಹಾಗೂ ಹವಾಮಾನ ಬದಲಾವಣೆಯ ಈ ಹೊಸ ವಿದ್ಯಮಾನ ಮನುಕುಲದಲ್ಲಿ ಆತಂಕವನ್ನು ಸೃಷ್ಟಿಸಿದೆ ಎಂದು ರಾಷ್ಟ್ರೀಯ ಸಾಗರ ಮತ್ತು ವಾತಾವರಣ ನಿರ್ವಹಣೆಯ (ಎನ್‌ಒಎಎ) ವರದಿಯೊಂದು ತಿಳಿಸಿದೆ.
‘‘2015ರಲ್ಲಿ ಜಾಗತಿಕ ಭೂಪ್ರದೇಶ ಮತ್ತು ಸಮುದ್ರ ಮೇಲ್ಮೈಯ ಸರಾಸರಿ ಉಷ್ಣತೆ 20ನೆ ಶತಮಾನದ ಸರಾಸರಿ ಉಷ್ಣತೆಗಿಂತ 0.9 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿತ್ತು’’ ಎಂದು ಎನ್‌ಒಎಎ ಹೇಳಿದೆ.
‘‘ಇದು 1880-2015ರ ಕೋಷ್ಟಕದಲ್ಲಿರುವ ಎಲ್ಲ ವರ್ಷಗಳಿಗಿಂತ ಅಧಿಕವಾಗಿದೆ’’.
2014ಕ್ಕೆ ಹೋಲಿಸಿದರೆ, ಕಳೆದ ವರ್ಷ 0.13 ಡಿಗ್ರಿ ಸೆಲ್ಸಿಯಸ್ ಹೆಚ್ಚು ಬಿಸಿಯಾಗಿತ್ತು. ಇದು ವಾರ್ಷಿಕ ಜಾಗತಿಕ ಉಷ್ಣತೆ ದಾಖಲೆಯೊಂದು ಮುರಿಯಲ್ಪಡುವ ಅತಿ ಹೆಚ್ಚಿನ ಅಂತರವಾಗಿದೆ.
ಹಲವಾರು ಉಪಗ್ರಹಗಳು ಮತ್ತು ಹವಾಮಾನ ಕೇಂದ್ರಗಳ ಮೂಲಕ ಜಾಗತಿಕ ಹವಾಮಾನದ ಮೇಲೆ ನಿಗಾ ಇಡುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ, ಕಳೆದ ವರ್ಷದ ಉಷ್ಣತೆ ಇತ್ತೀಚಿನ ವರ್ಷಗಳ ಉಷ್ಣತೆಯ ದಾಖಲೆಯನ್ನು ಅಗಾಧ ಅಂತರದಿಂದ ಹಿಂದಿಕ್ಕಿದೆ ಎಂದು ಹೇಳಿದೆ.
ಹೆಚ್ಚುತ್ತಿರುವ ಇಂಗಾಲದ ಡೈ ಆಕ್ಸೈಡ್ ಉತ್ಪಾದನೆ ಮತ್ತು ಇತರ ಮಾನವ ನಿರ್ಮಿತ ಮಾಲಿನ್ಯ ಪರಿಸರವನ್ನು ಸೇರುತ್ತಿರುವುದು ಉಷ್ಣತೆಯಲ್ಲಿನ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ನಾಸಾ ಆಡಳಿತಾಧಿಕಾರಿ ಚಾರ್ಲ್ಸ್ ಬೋಲ್ಡನ್ ಹೇಳಿದ್ದಾರೆ.





