ಮಾಜಿ ಶಾಸಕ ರಹೀಮ್‌ಖಾನ್ ವಿರುದ್ಧ ಲಿಂಗಾಯತ ಮುಖಂಡರ ದೂರು
ಬೆಂಗಳೂರು, ಜ.21: ಕಳೆದ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಸರಡಗಿ ವಿರುದ್ಧ ಕೆಲಸ ಮಾಡಿರುವ ಮಾಜಿ ಶಾಸಕ ರಹೀಮ್‌ಖಾನ್‌ಗೆ ಪಕ್ಷದ ಟಿಕೆಟ್ ನೀಡಬಾರದು ಎಂದು ಬೀದರ್ ಜಿಲ್ಲೆಯ ಲಿಂಗಾಯತ ಮುಖಂಡರು ಆಗ್ರಹಿಸಿದ್ದಾರೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ಸರಕಾರಿ ನಿವಾಸ ‘ಕಾವೇರಿ’ಯಲ್ಲಿ ಭೇಟಿ ಮಾಡಿದ ಬೀದರ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗುಂಡಪ್ಪ ವಕೀಲ ನೇತೃತ್ವದ ನಿಯೋಗವು, ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ರಹೀಮ್‌ಖಾನ್‌ಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಮನವಿ ಸಲ್ಲಿಸಿತು.
ಬೀದರ್ ಕ್ಷೇತ್ರದಿಂದ ಲಿಂಗಾಯತರಿಗೆ ಟಿಕೆಟ್ ನೀಡಿದರೆ ಗೆಲುವು ಸುಲಭವಾಗುತ್ತದೆ. ಈ ಸಂಬಂಧ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಇಂದು ನಗರಕ್ಕೆ ಆಗಮಿಸುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಗುಂಡಪ್ಪ ವಕೀಲ ಸುದ್ದಿಗಾರರಿಗೆ ತಿಳಿಸಿದರು.
ಕಳೆದ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ರಹೀಮ್ ಖಾನ್ ಕ್ಷೇತ್ರದಲ್ಲಿ ಯಾವುದೇ ರೀತಿಯ ಗುರುತರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಅವರಿಗೆ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಚುನಾವಣಾ ಫಲಿತಾಂಶವು ವ್ಯತಿರಿಕ್ತವಾಗಿರುತ್ತದೆ ಎಂದು ಬೀದರ್ ಜಿಲ್ಲೆಯ ಕಾಂಗ್ರೆಸ್ ಮುಖಂಡ ಅಯಾಝ್‌ಖಾನ್ ಹೇಳಿದರು.





