ಮಾಜಿ ಕೆಜಿಬಿ ಏಜಂಟ್ ಹತ್ಯೆಯಲ್ಲಿ ಪುಟಿನ್ ಪಾತ್ರ: ಬ್ರಿಟನ್ ನ್ಯಾಯಾಲಯ

ಲಂಡನ್, ಜ. 21: ರಶ್ಯ ಗುಪ್ತಚರ ಸಂಸ್ಥೆ ಕೆಜಿಬಿಯ ಮಾಜಿ ಏಜಂಟ್ ಅಲೆಕ್ಸಾಂಡರ್ ಲಿಟ್ವಿನೆಂಕೊರನ್ನು ಲಂಡನ್‌ನಲ್ಲಿ ವಿಕಿರಣ ಹಾಯಿಸಿ ನಡೆಸಲಾದ ಹತ್ಯೆಗೆ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ‘‘ಬಹುಷಃ ಅನುಮೋದನೆ’’ ನೀಡಿದ್ದಾರೆ ಎಂದು ಬ್ರಿಟಿಷ್ ನ್ಯಾಯಾಧೀಶರೊಬ್ಬರು ಗುರುವಾರ ಹೇಳಿದ್ದಾರೆ.
ಮಾಜಿ ಕೆಜಿಬಿ ಏಜಂಟ್‌ರ ಸಾವಿಗೆ ಸಂಬಂಧಿಸಿದ ಸಾರ್ವಜನಿಕ ವಿಚಾರಣೆಯ ಕೊನೆಯಲ್ಲಿ ನ್ಯಾಯಾಧೀಶ ರಾಬರ್ಟ್ ಓವನ್ ತನ್ನ 300 ಪುಟಗಳ ತೀರ್ಪಿನಲ್ಲಿ ತಿಳಿಸಿದರು.
‘‘ಲಿಟ್ವಿನೆಂಕೊರನ್ನು ಕೊಲ್ಲಲು ಎಫ್‌ಎಸ್‌ಬಿ (ರಶ್ಯದ ಭದ್ರತಾ ಸಂಸ್ಥೆ) ನಡೆಸಿದ ಕಾರ್ಯಾಚರಣೆಗೆ ಪಟ್ರುಶೆವ್ ಮತ್ತು ಅಧ್ಯಕ್ಷ ಪುಟಿನ್ ಬಹುಷಃ ಅನುಮೋದನೆ ನೀಡಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು.
ಪಟ್ರುಶೆವ್ ಎಫ್‌ಎಸ್‌ಬಿಯ ಮಾಜಿ ಮಹಾ ನಿರ್ದೇಶಕರು. ಅವರು 2008ರಿಂದ ರಕ್ಷಣಾ ಸಚಿವರಾಗಿದ್ದಾರೆ.
ಲಂಡನ್‌ನ ಹೊಟೇಲೊಂದರಲ್ಲಿ 2006ರಲ್ಲಿ ಪೊಲೋನಿಯಂ-210 ವಿಕಿರಣಶೀಲ ವಸ್ತುವನ್ನು ಬೆರೆಸಿದ ಚಹಾ ನೀಡಿ ಲಿಟ್ವಿನೆಂಕೊರನ್ನು ಹತ್ಯೆಗೈಯಲಾಗಿತ್ತು. ಪೊಲೋನಿಯಂ-210 ಅತ್ಯಂತ ದುಬಾರಿ ವಿಕಿರಣಶೀಲ ಐಸೋಟೋಪ್ ಆಗಿದ್ದು ಅತಿ ಭದ್ರತೆಯ ಪರಮಾಣು ಸಂಸ್ಥಾಪನೆಗಳಲ್ಲಿ ಮಾತ್ರ ಲಭಿಸುತ್ತದೆ.





