ಟ್ರಾಫಿಕ್ ಪೊಲೀಸರಿಗೆ ಶ್ವಾಸಕೋಶ ಸಂಬಂಧಿ ಪರೀಕ್ಷೆ

ಮಂಗಳೂರು, ಜ.21: ನಗರದ ಮಾಲಿನ್ಯ ರಹಿತ ಚಲಾವಣೆ (ಎಪಿಡಿ) ಸಂಸ್ಥೆಯು ಯೆನೆಪೊಯ ಮೆಡಿಕಲ್ ಕಾಲೇಜಿನ ರೆಸ್ಪಿರೇಟರಿ ಮೆಡಿಸಿನ್ ವಿಭಾಗದ ಸಹಯೋಗದೊಂದಿಗೆ ಮಂಗಳೂರು ಟ್ರಾಫಿಕ್ ಪೊಲೀಸರಿಗೆ ಮಾಲಿನ್ಯರಹಿತ ಶ್ವಾಸಕೋಶದ ಸಂಬಂಧಿ ಪರೀಕ್ಷೆ ನಡೆಸಲಾಯಿತು.
ಶ್ವಾಸಕೋಶ ಸಂಬಂಧಿ ಪರೀಕ್ಷೆಯಲ್ಲಿ ನಗರದ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯರು ಪಾಲ್ಗೊಂಡಿದ್ದರು. ಅತ್ಯಧಿಕ ವಾಯು ಮಾಲಿನ್ಯದಿಂದ ಬಳಲುವವರಿಗೆ ಶ್ವಾಸಕೋಶ ಸಂಬಂಧಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು. ಪರೀಕ್ಷೆಯ ಫಲಿತಾಂಶವನ್ನು ಮಾಲಿನ್ಯ ರಹಿತ ಚಲಾವಣೆ ಸಂಸ್ಥೆಯ ಗಮನಕ್ಕೆ ತಂದು ಮಂಗಳೂರು ನಗರದ ಟ್ರಾಫಿಕ್ ಪೊಲೀಸರು ವಾಯು ಮಾಲಿನ್ಯದಿಂದ ಯಾವ ತೊಂದರೆಯನ್ನು ಅನುಭವಿಸುತ್ತಾರೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಶ್ವಾಸಕೋಶ ಸಂಬಂಧಿ ಪರೀಕ್ಷೆಯಿಂದ ಶ್ವಾಸ ಕೋಶವು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆಯೇ ಎಂಬುದನ್ನು ತಿಳಿಯುವುದು ಮತ್ತು ಶ್ವಾಸಕೋಶವು ತೆಗೆದುಕೊಂಡ ಆಮ್ಲಜನಕವನ್ನು ದೇಹದ ಇತರ ಭಾಗಗಳಿಗೆ ಹರಿಸುವ ಪ್ರಮಾಣವನ್ನು ತಿಳಿಯಲು ಸಾಧ್ಯವಾಗುತ್ತದೆ. ಮಂಗಳೂರು ನಗರವು ಭಾರತದ ನಗರಗಳ ಪೈಕಿ ಅತೀ ವೇಗವಾಗಿ ಬೆಳೆಯುವ ನಗರವಾಗಿದೆ. ವಾಹನಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಉಗುಳುವ ವಿಷಕಾರಿ ಹೊಗೆಯು ಸಹ ಅಧಿಕವಾಗಿ ವಾಯು ಮಾಲಿನ್ಯವೂ ವಿಪರೀತ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂದು ಎಪಿಡಿಯ ಪ್ರಕಟನೆ ತಿಳಿಸಿದೆ.





