ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ಮಿಂಚಲಿದೆ ಕೊಡಗಿನ ಕಾಫಿ
.jpg)
ಮಡಿಕೇರಿ ಜ.21:ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಕೊಡಗಿನ ಪ್ರಧಾನ ಬೆಳೆ ಕಾಫಿ ಕುರಿತಾದ ಸ್ತಬ್ಧಚಿತ್ರವು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮೂಡಿಬರಲಿದೆ. ಕೊಡಗು ಭಾರತದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಕಾಫಿಯನ್ನು ಉತ್ಪಾದಿಸುತ್ತದೆ. ಜ.26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾದ ಸ್ಥಬ್ಧಚಿತ್ರ ಪ್ರದರ್ಶನಕ್ಕಾಗಿ ವ್ಯಾಪಕ ಸಿದ್ಧತೆ ನಡೆಯುತ್ತಿದೆ. ಕಾಫಿ ಬೆಳೆಗೆ ಸಂಬಂಧಿಸಿದಂತೆ ಸ್ತಬ್ಧಚಿತ್ರ ನಿರ್ಮಾಣವಾಗುತ್ತಿದೆ. ತನ್ಮೂಲಕ ಹೊಸದಿಲ್ಲಿಯ ರಾಜಪಥದ ಮೂಲಕ ಕೊಡಗಿನ ಕಾಫಿ ಪರಿಮಳ ಇಡೀ ವಿಶ್ವಕ್ಕೆ ಪಸರಿಸಲಿದೆ. ಸ್ತಬ್ಥಚಿತ್ರದಲ್ಲಿರುವ ವಿಶೇಷತೆ
ಕಾಫಿ ಬೀಜ ಬಿತ್ತನೆ, ಕಾಫಿ ಬೆಳೆಯು ವುದು, ಕಾಫಿ ಹುಡಿ ತಯಾರಿಕೆ ಸೇರಿದಂತೆ ಕಾಫಿ ಉತ್ಪಾದನೆಯ ವಿವಿಧ ಹಂತಗಳು ಸ್ತಬ್ಧಚಿತ್ರದಲ್ಲಿ ಬಿಂಬಿತವಾಗಲಿವೆ. ಮುಂಭಾಗದಲ್ಲಿ ಒಂದು ಲೋಟದಿಂದ ಮತ್ತೊಂದು ಲೋಟಕ್ಕೆ ಕಾಫಿ ಬೆರೆಸುತ್ತಿರುವ ದೃಶ್ಯವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗುತ್ತಿದೆ. ವಿಶ್ವದ 60 ರಾಷ್ಟ್ರಗಳು ಬಳಸುತ್ತಿರುವ ಕಾಫಿ ಹೇಗೆ ಜೀವನದ ಅವಿಭಾಜ್ಯ ಅ
ಂಗವಾಗಿದೆ ಎಂಬ ವಿವರಣೆಯೂ ಇದರಲ್ಲಿ ಇರಲಿದೆ. ಜೊತೆಗೆ, ಕೊಡಗಿನ 8 ಮಹಿಳೆಯರು ಮತ್ತು ಇಬ್ಬರು ಪುರುಷರು ಸಾಂಪ್ರದಾಯಿಕ ಕೊಡವ ನೃತ್ಯದ ಮೂಲಕ ಸ್ತಬ್ಧಚಿತ್ರಕ್ಕೆ ಕಳೆ ತುಂಬಲಿದ್ದಾರೆ. ಸ್ತಬ್ಧಚಿತ್ರ ಸಾಗುವ ವೇಳೆ ಕಾಫಿಯ ಸುಗಂಧವನ್ನು ಜನರಿಗೆ ತಲುಪಿಸಲು ಬೃಹತ್ ಗಾತ್ರದ ಗ್ಯಾಸ್ ಕಂಟೇನರ್ ಮೂಲಕ ಕಾಫಿಯ ಪರಿಮಳ ಹೊರಸೂಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರಾದ ಎನ್.ಆರ್.ವಿಶುಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಕಲಾ ನಿರ್ದೇಶಕರಾದ ಶಶಿಧರ ಅಡಪ ಮತ್ತು ಸತೀಶ್ ಸ್ತಬ್ಧಚಿತ್ರ ವಿನ್ಯಾಸ ಮಾಡುತ್ತಿದ್ದು, ಪ್ರವೀಣ್ ಡಿ.ರಾವ್ ಕೊಡಗು ಶೈಲಿಯ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.





