ಪಾಕ್‌ನಿಂದ ಪರಮಾಣು ಬಾಂಬ್? ಉತ್ತರಿಸಲು ಸೌದಿ ಅರೇಬಿಯ ನಕಾರ
ವಾಶಿಂಗ್ಟನ್, ಜ. 21: ಸೌದಿ ಅರೇಬಿಯವು ಪಾಕಿಸ್ತಾನದಿಂದ ಪರಮಾಣು ಶಸ್ತ್ರಗಳನ್ನು ಖರೀದಿಸಲು ಯತ್ನಿಸುತ್ತಿದೆ ಎಂಬ ವರದಿಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲು ಸೌದಿ ಅರೇಬಿಯದ ವಿದೇಶ ಸಚಿವ ಅದೆಲ್ ಅಲ್-ಜುಬೈರ್ ನಿರಾಕರಿಸಿದ್ದಾರೆ. ಆದರೆ, ತನ್ನನ್ನು ತಾನು ರಕ್ಷಿಸಲು ತೆಗೆದುಕೊಳ್ಳಬೇಕಾದ ಎಲ್ಲ ಕ್ರಮಗಳನ್ನು ಸೌದಿ ಅರೇಬಿಯವು ತೆಗೆದುಕೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘‘ವಿದೇಶ ಸರಕಾರಗಳೊಂದಿಗೆ ಹಾಗೂ ಮಿತ್ರ ದೇಶಗಳ ಸರಕಾರಗಳೊಂದಿಗೆ ನಾವು ನಡೆಸಿದ ಮಾತುಕತೆಗಳ ವಿವರಗಳ ಬಗ್ಗೆ ನಾನಿಲ್ಲಿ ಚರ್ಚಿಸುವುದಿಲ್ಲ. ನೀವು ಅದನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂಬ ವಿಶ್ವಾಸ ನನಗಿದೆ’’ ಎಂದು ಅವರು ಹೇಳಿದರು.
‘‘ಈ ವಿಷಯದ ಬಗ್ಗೆ ನಾನು ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡುವುದಿಲ್ಲ, ಟಿವಿಯಲ್ಲಂತೂ ಮೊದಲೇ ಇಲ್ಲ’’ ಎಂದು ಪಾಕಿಸ್ತಾನದೊಂದಿಗಿನ ಪರಮಾಣು ಸಹಕಾರದ ಕುರಿತು ಅಮೆರಿಕದ ಟಿವಿ ಸುದ್ದಿ ಚಾನೆಲ್ ಸಿಎನ್‌ಎನ್ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಪರಮಾಣು ಶಸ್ತ್ರಗಳ ವ್ಯಾಪಾರದಲ್ಲಿ ತೊಡಗದಂತೆ ಸೌದಿ ಅರೇಬಿಯ ಮತ್ತು ಪಾಕಿಸ್ತಾನಗಳಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಎಚ್ಚರಿಕೆ ನೀಡಿದ ಒಂದು ದಿನದ ಬಳಿಕ ಸೌದಿ ವಿದೇಶ ಸಚಿವರು ಈ ಹೇಳಿಕೆ ನೀಡಿದ್ದಾರೆ. ಇಂಥ ಯೋಜನೆಯನ್ನು ಸೌದಿ ಅರೇಬಿಯ ಮುಂದುವರಿಸಿದ್ದೇ ಆದರೆ, ಪರಮಾಣು ಪ್ರಸರಣ ತಡೆ ಒಪ್ಪಂದದ ಎಲ್ಲ ರೀತಿಯ ಪರಿಣಾಮಗಳಿಗೆ ಅದು ಗುರಿಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.





