ತಜಿಕಿಸ್ತಾನ : 13,000 ಪುರುಷರ ಗಡ್ಡ ಬೋಳಿಸಿದ ಪೊಲೀಸರು
ದುಶಾಂಬೆ, ಜ. 21: ‘‘ವಿದೇಶಿ’’ ಪ್ರಭಾವವನ್ನು ತಡೆಯುವುದಕ್ಕಾಗಿ ತಜಿಕಿಸ್ತಾನ್ ಪೊಲೀಸರು ಸುಮಾರು 13,000 ಪುರುಷರ ಗಡ್ಡ ಬೋಳಿಸಿದ್ದಾರೆ ಹಾಗೂ ಸಾಂಪ್ರದಾಯಿಕ ಮುಸ್ಲಿಮ್ ಬಟ್ಟೆಗಳನ್ನು ಮಾರಾಟ ಮಾಡುವ 160ಕ್ಕೂ ಅಧಿಕ ಅಂಗಡಿಗಳನ್ನು ಮುಚ್ಚಿದ್ದಾರೆ ಎಂದು ವರದಿಯಾಗಿದೆ.
ಅದೂ ಅಲ್ಲದೆ, ತಲೆವಸ್ತ್ರಗಳನ್ನು ಧರಿಸುವುದನ್ನು ನಿಲ್ಲಿಸುವಂತೆ 1,700ಕ್ಕೂ ಅಧಿಕ ಮಹಿಳೆಯರ ಮನವೊಲಿಸಲಾಗಿದೆ ಎಂದು ಗುರುವಾರ ಅಲ್-ಜಝೀರದ ವರದಿಯೊಂದು ತಿಳಿಸಿದೆ.
ನೆರೆಯ ಅಫ್ಘಾನಿಸ್ತಾನದಿಂದ ಜನರು ಪ್ರಭಾವಿತಗೊಳ್ಳುವುದನ್ನು ತಡೆಯುವ ಪ್ರಯತ್ನವಾಗಿ ದೇಶದ ಜಾತ್ಯತೀತ ನಾಯಕತ್ವ ಈ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅದು ಹೇಳಿದೆ.
ಕಳೆದ ವಾರ ತಜಿಕಿಸ್ತಾನ್ ಸಂಸತ್ತು ಅರಬ್ ಮಾದರಿಯ ಹೆಸರುಗಳು ಹಾಗೂ ನೇರ ಸಹೋದರ ಸಂಬಂಧಿಗಳ ನಡುವೆ ಮದುವೆಯನ್ನು ನಿಷೇಧಿಸಿತ್ತು. ಕಳೆದ ವರ್ಷ ತಜಿಕಿಸ್ತಾನದ ಸುಪ್ರೀಂ ಕೋರ್ಟ್ ದೇಶದ ಇಸ್ಲಾಮಿಕ್ ಪುನರುತ್ಥಾನ ಪಕ್ಷವನ್ನು ನಿಷೇಧಿಸಿತ್ತು. ಹಲವು ತಿಂಗಳುಗಳ ಕಾಲ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿತ್ತು.
ಜಾತ್ಯತೀತತೆಯನ್ನು ಎತ್ತಿಹಿಡಿಯುವ ಹಾಗೂ ವಿದೇಶಿ ಪ್ರಭಾವವನ್ನು ನಿರುತ್ತೇಜನಗೊಳಿಸುವ ನೂತನ ಕಾನೂನುಗಳಿಗೆ ಅಧ್ಯಕ್ಷ ಇಮೋಮಲಿ ರಖ್ಮಾನ್ ಅಂಗೀಕಾರ ನೀಡುವ ನಿರೀಕ್ಷೆಯಿದೆ. ಅವರು 1994ರಿಂದ ದೇಶದ ಚುಕ್ಕಾಣಿ ವಹಿಸಿದ್ದು, ಅವರ ಹಾಲಿ ಅವಧಿ 2020ರಲ್ಲಿ ಮುಗಿಯಲಿದೆ.







