ಮತ ಚಲಾಯಿಸಿ ಸೇವಾಲಾಲ್ ಜಯಂತಿಗೆ ಬನ್ನಿ: ಪರಮೇಶ್ವರ್ ನಾಯ್ಕ್

ಬೆಂಗಳೂರು, ಜ. 21: ಬಂಜಾರ(ತಾಂಡಾ) ಅಭಿವೃದ್ಧಿ ನಿಗಮದಿಂದ ಫೆ.14ರಿಂದ ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ನಡೆಯಲಿರುವ ‘ಸೇವಾಲಾಲ್ ಜಯಂತಿ’ಗೆ ಸಮುದಾಯದ ಭಕ್ತರು ಫೆ.13ರಂದು ನಡೆಯಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸಿ ಆಗಮಿಸಬೇಕೆಂದು ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ್ ಮನವಿ ಮಾಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾಲಾಲ್ ಜಯಂತಿಗೆ ಆಗಮಿಸುವ ಸಮುದಾಯದ ಭಕ್ತರು ಮಾಲಾಧಾರಣೆ ಮಾಡಿ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದು, ಚುನಾವಣೆ ಅದೇ ಅವಧಿಯಲ್ಲಿ ನಿಗದಿಯಾಗಿದೆ. ಹೀಗಾಗಿ ಮೊದಲು ಮತದಾನ ಮಾಡಿ ಆ ಬಳಿಕ ಆ ಯಾತ್ರೆ ಕೈಗೊಳ್ಳುವಂತೆ ಕೋರಿದರು.
ಸಮುದಾಯದ ಗುರು ರಾಮರಾವ್ ಮಹಾರಾಜ್ ಅವರೂ ಜಯಂತ್ಯುತ್ಸವಕ್ಕೆ ಆಗಮಿಸಲಿದ್ದು, ಸಂಪ್ರದಾಯದಂತೆ ಜಯಂತಿ ನಡೆಯಲಿದೆ ಎಂದ ಅವರು, ನಿಗಮದಿಂದ ಈಗಾಗಲೇ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿದ್ದ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಲಜಾ ನಾಯಕ್ ಮಾತನಾಡಿ, ಸೇವಾಲಾಲ್ ಜಯಂತಿಯಷ್ಟೇ ಚುನಾವಣೆಯೂ ಮುಖ್ಯ. ಹೀಗಾಗಿ ಸಮುದಾಯದ ಎಲ್ಲರೂ ಮತದಾನದ ಮಾಡಿದ ಬಳಿಕ ಉತ್ಸವಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.





