ರೋಹಿತ್ ಆತ್ಮಹತ್ಯೆ ಪ್ರಕರಣ; ಪ್ರಧಾನಿ ಮೋದಿ ದಲಿತರ ಕ್ಷಮೆ ಕೋರಲಿ: ಉಗ್ರಪ್ಪ

ಬೆಂಗಳೂರು, ಜ. 21: ಹೈದರಾಬಾದ್‌ನ ಕೇಂದ್ರೀಯ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮತಿ ಇರಾನಿ ವಿರುದ್ಧ ಕ್ರಮ ಜರಗಿಸಬೇಕು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ದಲಿತರ ಕ್ಷಮೆ ಕೋರಬೇಕು ಎಂದು ಮೇಲ್ಮನೆ ಸದಸ್ಯ ವಿ.ಎಸ್. ಉಗ್ರಪ್ಪ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರಕಾರ ಕೃಷಿ ಕೂಲಿ ಕಾರ್ಮಿಕರು ಮತ್ತು ದಲಿತರನ್ನು ಎರಡನೆ ದರ್ಜೆ ಪ್ರಜೆಗಳನ್ನಾಗಿ ಕಾಣುತ್ತಿರುವುದು ರೋಹಿತ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸಂಪನ್ಮೂಲ ಸಚಿವೆ ಸ್ಮತಿಇರಾನಿ ಅವರನ್ನು ಈ ಪ್ರಕರಣದಲ್ಲಿ ಆರೋಪಿ ಎಂದು ಪರಿಗಣಿಸಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ, ಆಂಧ್ರ ವಿಧಾನ ಪರಿಷತ್ ಸದಸ್ಯ ರಾಮಚಂದ್ರ ರಾವ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಉಗ್ರಪ್ಪ ಇದೇ ವೇಳೆ ಆಗ್ರಹಿಸಿದರು.
ಬಂಡಾರು ದತ್ತಾತ್ರೇಯ ಮತ್ತು ರಾಮಚಂದ್ರ ರಾವ್ ಅವರ ಒತ್ತಡದ ಕಾರಣಕ್ಕೆ ದಲಿತ ವಿದ್ಯಾರ್ಥಿಗಳನ್ನು ವಿಶ್ವ ವಿದ್ಯಾನಿಲಯದಿಂದ ಬಹಿಷ್ಕಾರ ಹಾಕಲಾಗಿದೆ ಎಂದು ದೂರಿದ ಅವರು, ಆತ್ಮಹತ್ಯೆ ಪ್ರಕರಣದ ಎಫ್‌ಐಆರ್‌ನಲ್ಲಿ ಹೆಸರಿರುವ ಎಲ್ಲರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಬೇಕು. ಹಾಸ್ಟೆಲ್‌ನಿಂದ ದಲಿತ ವಿದ್ಯಾರ್ಥಿಗಳಿಗೆ ಬಹಿಷ್ಕಾರ ಹಾಕಿರುವುದು ಸಂವಿಧಾನಬಾಹಿರ ಎಂದು ಉಲ್ಲೇಖಿಸಿದರು.
ಹರಿಯಾಣದಲ್ಲಿ ದಲಿತ ಮಕ್ಕಳನ್ನು ಸಜೀವ ದಹನ ಮಾಡಿದ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಕೆ.ಸಿಂಗ್ ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಚೆನ್ನೈ ಐಐಟಿಯಲ್ಲಿ ಮೋದಿ ವಿರುದ್ಧ ಹೇಳಿಕೆ ನೀಡಿದ ನೆಪದಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಲಾಗಿತ್ತು.
ಇದೀಗ ಹೈದರಾಬಾದ್‌ನಲ್ಲಿ ದಲಿತ ವಿದ್ಯಾರ್ಥಿಗಳನ್ನು ಕ್ಷುಲ್ಲಕ ಕಾರಣಕ್ಕೆ ಬಹಿಷ್ಕಾರ ಹಾಕಿರುವುದನ್ನು ನೋಡಿದರೆ ಬಿಜೆಪಿ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ವಿವಿ ಆಂತರಿಕ ಸಮಿತಿ ಈ ಪ್ರಕರಣಕ್ಕೂ ಮುನ್ನ ವಿವಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ವರದಿ ನೀಡಿದ್ದು, ಅದರಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಪಾತ್ರವಿಲ್ಲ ಎಂದು ಹೇಳಿತ್ತು. ಆದರೂ, ದಲಿತ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದ್ದು, ರೋಹಿತ್ ಆತ್ಮಹತ್ಯೆಗೆ ಮೂಲ ಕಾರಣ ಎಂದು ಅವರು ವಿಶ್ಲೇಷಿಸಿದರು.





