ಕೋಟ್ಯಧಿಪತಿ ಬೀಡಿ ಉದ್ಯಮಿಗೆ ಜೀವಾವಧಿ ಶಿಕ್ಷೆ

ತಿರುವನಂತಪುರ, ಜ.21: ವರ್ಷದ ಹಿಂದೆ ಕೋಪದ ಭರದಲ್ಲಿ ತನ್ನ ಐಷಾರಾಮಿ ವಸತಿ ಸಮುಚ್ಚಯದ ಕಾವಲುಗಾರ ಚಂದ್ರ ಬೋಸ್ ಮೇಲೆ ತನ್ನ ಹಮ್ಮರ್ ವಾಹನವನ್ನು ಹತ್ತಿಸಿ ಹತ್ಯೆಗೈದಿದ್ದ ಕೇರಳದ ಬಹು ಕೋಟ್ಯಧಿಪತಿ ಬೀಡಿ ಉದ್ಯಮಿ ಮುಹಮ್ಮದ್ ನಿಝಾಮ್(39)ಗೆ ಗುರುವಾರ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ. ಜೊತೆಗೆ 71ಲ.ರೂ.ದಂಡವನ್ನೂ ವಿಧಿಸಿದೆ.
ಸ್ಥಳೀಯವಾಗಿ ಕೇರಳದ ‘ಬೀಡಿ ಕಿಂಗ್’ಎಂದೇ ಹೆಸರಾಗಿರುವ ನಿಝಾಮ್‌ನನ್ನು ತಪ್ಪಿತಸ್ಥನೆಂದು ನ್ಯಾಯಾಲಯವು ಬುಧವಾರ ಘೋಷಿಸಿತ್ತು. ತಾನು ‘ದ್ವಿ ಧ್ರುವೀಯ ವಿಕಾರ’ದಿಂದ ನರಳುತ್ತಿರುವುದರಿಂದ ಶಿಕ್ಷೆಯಲ್ಲಿ ಉದಾರತೆಯನ್ನು ತೋರಿಸುವಂತೆ ನಿಷಾಮ್ ನ್ಯಾಯಾಲಯವನ್ನು ಕೋರಿಕೊಂಡಿದ್ದ.
ನಿಝಾಮ್ 13 ಕ್ರಿಮಿನಲ್ ಪ್ರಕರಣಗಳ ಸರದಾರನಾಗಿದ್ದು, ಈ ಪೈಕಿ ಹೆಚ್ಚಿನವು ನ್ಯಾಯಾಲಯದ ಹೊರಗೆ ಇತ್ಯರ್ಥಗೊಂಡಿದ್ದವು. ಮೂರು ವರ್ಷಗಳ ಹಿಂದೆ ಆತನ ಒಂಬತ್ತರ ಹರೆಯದ ಪುತ್ರ ಫೆರಾರಿಯನ್ನು ಚಲಾಯಿಸುತ್ತಿದ್ದ ವೀಡಿಯೊ ಯುಟ್ಯೂಬಿನಲ್ಲಿ ಅಪ್‌ಲೋಡ್ ಆಗಿದ್ದು, ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಲ್ಲದೆ ಆತನ ದುಸ್ಸಾಹಸದ ಬಗ್ಗೆ ಭಾರೀ ಜನಾಕ್ರೋಶ ವ್ಯಕ್ತವಾಗಿತ್ತು. ಆ ಪ್ರಕರಣದಲ್ಲಿ ಆತ ಮೊದಲ ಬಾರಿಗೆ ತಪ್ಪಿತಸ್ಥನೆಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟಿದ್ದ.
ತೃಶ್ಶೂರಿನಲ್ಲಿ ಐಷಾರಾಮಿ ವಸತಿ ಸಮುಚ್ಚಯದ ನಿವಾಸಿಯಾದ ನಿಝಾಮ್ ಕಳೆದ ವರ್ಷದ ಜ.28ರಂದು ಬೆಳಗ್ಗೆ ಭದ್ರತಾ ಕಾವಲುಗಾರ ಚಂದ್ರ ಬೋಸ್(51) ಅಪಾರ್ಟ್‌ಮೆಂಟಿನ ಪ್ರವೇಶದ್ವಾರವನ್ನು ತೆರೆಯಲು ವಿಳಂಬಿಸಿದ್ದರಿಂದ ಕೋಪಗೊಂಡು ಆತನ ಮೇಲೆ ಹಲ್ಲೆ ನಡೆಸಿದ್ದ. ಬೋಸ್ ತಪ್ಪಿಸಿಕೊಂಡು ಓಡಿದಾಗ ಮೊದಲೇ ಪಾನಮತ್ತನಾಗಿದ್ದ ನಿಝಾಮ್ ಇನ್ನಷ್ಟು ಕ್ರುದ್ಧಗೊಂಡು ತನ್ನ ಸ್ಪೋರ್ಟ್ಸ್ ಯುಟಿಲಿಟಿ ವಾಹನ ‘ಹಮ್ಮರ್’ನಲ್ಲಿ ಆತನನ್ನು ಬೆನ್ನಟ್ಟಿ ಢಿಕ್ಕಿ ಹೊಡೆಸಿದ್ದ.
ಹಮ್ಮರ್ ಮತ್ತು ಗೋಡೆಯ ನಡುವೆ ಸಿಲುಕಿದ್ದ ಬೋಸ್‌ನನ್ನು ವಾಹನದೊಂದಿಗೆ ಸುಮಾರು 700 ಮೀ.ಗಳಷ್ಟು ದೂರ ಎಳೆದೊಯ್ದು ‘ಈ ನಾಯಿ ಸಾಯುವುದಿಲ್ಲ ’ಎಂದು ಕೂಗಾಡಿ ಅಲ್ಲಿಯೇ ಆತನನ್ನು ಎಸೆದು ಹೋಗಿದ್ದ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬೋಸ್ ಮೂರು ವಾರಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ಪ್ರಕರಣ ರಾಜ್ಯವ್ಯಾಪಿ ಆಕ್ರೋಶವನ್ನು ಸೃಷ್ಟಿಸಿದ ಬಳಿಕ ಪೊಲೀಸರು ನಿಝಾಮ್‌ನನ್ನು ಬಂಧಿಸಿದ್ದರು.
ಬೋಸ್ ಕುಟುಂಬಕ್ಕೆ ಐದು ಕೋ.ರೂ.ಗಳ ಪರಿಹಾರವನ್ನು ಪ್ರಾಸಿಕ್ಯೂಷನ್ ಕೋರಿತ್ತಾದರೂ, ದಂಡದ ಹಣದಲ್ಲಿ 50ಲ.ರೂ.ಗಳನ್ನು ಪರಿಹಾರವಾಗಿ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ.
ರಫ್ತು ವ್ಯವಹಾರದ ಜೊತೆಗೆ ಮಧ್ಯಪ್ರಾಚ್ಯದಲ್ಲಿ ಸರಣಿ ಉದ್ಯಮಗಳ ಒಡೆಯನಾಗಿರುವ ನಿಝಾಮ್ ಭಾರತದಲ್ಲಿ ಮತ್ತು ವಿದೇಶಗಳಲ್ಲಿ 5,000 ಕೋ.ರೂ.ಗಳ ಆಸ್ತಿಯನ್ನು ಹೊಂದಿದ್ದಾನೆ.







