ಕೇಸರೀಕರಣ ಪಠ್ಯ ಪರಿಷ್ಕರಣೆ; ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯಕ್ರಮ: ಕಿಮ್ಮನೆ

ಬೆಂಗಳೂರು, ಜ.21: ಒಂದನೆ ತರಗತಿಯಿಂದ ಹನ್ನೆರಡನೆ ತರಗತಿಯ ವರೆಗಿನ ಪಠ್ಯ ‘ಕೇಸರೀಕರಣ’ ಅಂಶಗಳನ್ನು ಪರಿಷ್ಕೃರಿಸಿ, ಹೊಸ ಪಠ್ಯಕ್ರಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಠ್ಯ-ಪುಸ್ತಕ ಪರಿಷ್ಕರಣೆಗೆ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಬಗ್ಗೆ ಆ ಸಮಿತಿ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
2009ರಲ್ಲಿ ರಾಜ್ಯದಲ್ಲಿ ಒಂದನೆ ತರಗತಿಯಿಂದ ಹನ್ನೆರಡನೆ ತರಗತಿ ವರೆಗಿನ ಪಠ್ಯ-ಪುಸ್ತಕಗಳಲ್ಲಿ ‘ಕೇಸರೀಕರಣ’ ಪ್ರೇರಿತ ಅಂಶಗಳು ಸೇರ್ಪಡೆಯಾಗಿದ್ದು, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಅಂತಹ ಕೆಲ ಪದ ಮತ್ತು ವಾಕ್ಯಗಳನ್ನು ಈಗಾಗಲೇ ಪಠ್ಯ ಕ್ರಮದಿಂದ ಕೈಬಿಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
2017 ಮತ್ತು 18ನೆ ಸಾಲಿಗೆ ಕೇಸರೀಕರಣಗೊಂಡಿರುವ ಪಠ್ಯಕ್ರಮವನ್ನು ಪೂರ್ತಿಯಾಗಿ ಪರಿಷ್ಕೃರಿಸಿ ಹೊಸ ಪಠ್ಯ ಕ್ರಮವನ್ನು ಜಾರಿಗೆ ತರಲಾಗುವುದು. ಅಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಜ್ಞಾನ ಆಧಾರಿತ ಪಠ್ಯ ಕ್ರಮವನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಸಮಾಜ, ವಿಜ್ಞಾನ ಸೇರಿ ಇನ್ನಿತರ ವಿಷಯಗಳ ಪಠ್ಯಗಳಲ್ಲಿ ಅಷ್ಟೇನು ಬದಲಾವಣೆ ಆಗಿಲ್ಲ. ಆದರೆ, ಇತಿಹಾಸ ಪಠ್ಯ ಕ್ರಮದಲ್ಲಿ ಕೇಸರೀಕರಣ ಆಗಿದ್ದು, ಅವುಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕಿಮ್ಮನೆ ರತ್ನಾಕರ ಸ್ಪಷ್ಟಣೆ ನೀಡಿದರು.







