ಕೇಂದ್ರೀಯ ವಿದ್ಯಾಲಯದ ಶುಲ್ಕ ಹೆಚ್ಚಳ: ಪರಿಶೀಲಿಸಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಜ.21: ಕೋಲಾರ ಜಿಲ್ಲೆಯ ಕೆಜಿಎಫ್ ಬೆಮಲ್‌ನಗರದ ಕೇಂದ್ರೀಯ ವಿದ್ಯಾಲಯ 2014ರ ಎಪ್ರಿಲ್‌ನಿಂದ ಬಿಇಎಂಎಲ್ ಉದ್ಯೋಗಿಗಳಲ್ಲದವರ ಮಕ್ಕಳಿಗೆ ಹೆಚ್ಚಿಸಿದ್ದ ಬೋಧನಾ ಶುಲ್ಕ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಶೀಲನೆ ನಡೆಸುವಂತೆ ವಿದ್ಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕೇಂದ್ರೀಯ ವಿದ್ಯಾಲಯ ಬೋಧನಾ ಶುಲ್ಕವನ್ನು ಹೆಚ್ಚಿಸಿದ್ದ ಕ್ರಮ ಪ್ರಶ್ನಿಸಿ ಕೇಂದ್ರೀಯ ವಿದ್ಯಾಲಯದ ಪೋಷಕರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕ ಸದಸ್ಯ ಪೀಠ. ಶುಲ್ಕ ಹೆಚ್ಚಿಸಿದ ಕ್ರಮವನ್ನು ಮಾನ್ಯ ಮಾಡಿತು. ಆದರೆ, ಶಾಲಾ ಆಡಳಿತ ಮಂಡಳಿ ಏಕಾಏಕಿ ಶೇ.300ರಷ್ಟು ಶುಲ್ಕ ಹೆಚ್ಚಿಸಿದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಅಷ್ಟೊಂದು ಪ್ರಮಾಣದಲ್ಲಿ ಶುಲ್ಕ ಹೆಚ್ಚಿಸಲು ಸಕಾರಣ ನೀಡಿಲ್ಲ ಮತ್ತು ಶುಲ್ಕ ಹೆಚ್ಚಳ ಮಾಡುವಾಗ ವಿವೇಚನೆ ಬಳಸಿಲ್ಲ. ಹೀಗಾಗಿ, ಹೆಚ್ಚಿಸಿದ ಶುಲ್ಕದ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮರುಪರಿಶೀಲನೆ ನಡೆಸಬೇಕು ಎಂದು ಸೂಚಿಸಿತು.
ಕೋಲಾರ ಜಿಲ್ಲೆ ಕೆಜಿಎಫ್ ಬೆಮೆಲ್ ನಗರದ ಕೇಂದ್ರೀಯ ವಿದ್ಯಾಲಯವು 2014ರ ಎಪ್ರಿಲ್‌ನಿಂದ ಬಿಇಎಂಎಲ್ ಉದ್ಯೋಗಿಗಳಲ್ಲದವರ 1ರಿಂದ 8ನೆ ತರಗತಿವರೆಗಿನ ಮಕ್ಕಳ ಬೋಧನಾ ಶುಲ್ಕವನ್ನು ತಿಂಗಳಿಗೆ 600ರಿಂದ 2,100 ರೂ.ಗೆ ಹೆಚ್ಚಿಸಿತ್ತು. 9 ಮತ್ತು 10ನೆ ತರಗತಿಯ ವಿದ್ಯಾರ್ಥಿನಿಯರ ತಿಂಗಳ ಬೋಧನಾ ಶುಲ್ಕವನ್ನು 2,100 ರೂ., ವಿದ್ಯಾರ್ಥಿಯ ಶುಲ್ಕವನ್ನು 2,300 ರೂ.ಗೆ ಹೆಚ್ಚಿಸಿತ್ತು.





