ಕುಮ್ಕಿ ಭೂಮಿಗಾಗಿ 3 ವಿಧದ ಹೋರಾಟಕ್ಕೆ ಭಾಕಿಸಂ ನಿರ್ಧಾರ

ಉಡುಪಿ, ಜ.21: ಕುಮ್ಕಿ ಭೂಮಿಯು ಉಡುಪಿ ಮತ್ತು ದ.ಕ. ಜಿಲ್ಲೆಗಳ ರೈತರಿಗೆ ತಮ್ಮ ಕೃಷಿ ಭೂಮಿಯೊಂದಿಗೆ ಹೊಂದಿಕೊಂಡು ಬಂದಿರುವ ಮೂಲಭೂತ ಹಕ್ಕಾಗಿದೆ. ಕುಮ್ಕಿ ಭೂಮಿಯಲ್ಲಿ ಈಗಾಗಲೇ ಅನೇಕ ರೈತರು ಮನೆ, ತೋಟಗಳನ್ನು ನಿರ್ಮಿಸಿದ್ದಾರೆ. ಆದರೆ ಇತ್ತೀಚಿನ ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಈಗ ಅದು ಕೈತಪ್ಪಿಹೋಗುವ ಆತಂಕವನ್ನು ಇಲ್ಲಿನ ರೈತರು ಎದುರಿಸುತ್ತಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಹೇಳಿದ್ದಾರೆ.
ಭಾರತೀಯ ಕಿಸಾನ್ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ‘ಕುಮ್ಕಿ ಭೂಮಿ ನಮ್ಮ ಭೂಮಿ’ ಎಂಬ ವಿಷಯದ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ದ.ಕ. ಮತ್ತು ಉಡುಪಿ ಜಿಲ್ಲೆಯ ಕುಮ್ಕಿ ಹೋರಾಟ ಸಮಿತಿಯ ಅಧ್ಯಕ್ಷ ರಾಮಚಂದ್ರ ನೆಕ್ಕಿಲ ಮಾತನಾಡಿ, ಕುಮ್ಕಿ ಹೋರಾಟದ ವಿವಿಧ ಹಂತಗಳ ಬಗ್ಗೆ ಹಾಗೂ ಕುಮ್ಕಿ ಕುರಿತು ನ್ಯಾಯಾಲಯಗಳಿಂದ ಬಂದ ವಿವಿಧ ತೀರ್ಪುಗಳನ್ನು ವಿಶ್ಲೇಷಿಸಿದರು. ಇತ್ತೀಚೆಗೆ ಕೆ.ಶ್ಯಾಮ ಭಟ್ಟ ಮತ್ತಿತರರು ಹಾಗೂ ಸರಕಾರದ ನಡುವಿನ ವ್ಯಾಜ್ಯದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿ
ಪರಿಣಾಮವಾಗಿ ಅತಂತ್ರದಲ್ಲಿರುವ ಕುಮ್ಕಿ ಭೂಮಿ ಹೊಂದಿರುವ ರೈತರ ಪರವಾಗಿ ಹೋರಾಟ ಮುಂದುವರಿಸಲು ಭಾಕಿಸಂ ನಿರ್ಧರಿಸಿದ್ದು, ಮೂರು ವಿಧಗಳಲ್ಲಿ ಹೋರಾ ಟಕ್ಕೆ ಸಜ್ಜಾಗಿದೆ ಎಂದರು. ಕಳೆದ ವಾರ ಪುತ್ತೂರಿನಲ್ಲಿ ನಡೆದ ಸಭೆ ಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಹಾಗೂ ರಾಜ್ಯ ಹೈಕೋರ್ಟ್‌ನಲ್ಲಿ ಹೊಸದಾಗಿ ರಿಟ್ ಅರ್ಜಿ ಸಲ್ಲಿಸಿ ನ್ಯಾಯಾಂಗ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆ ಆರು ಜಿಲ್ಲೆಗಳಲ್ಲಿರುವ ರೈತರ ಕುಮ್ಕಿ ಹಕ್ಕನ್ನು ನೀಡುವ ಕುರಿತು ಈಗಾಗಲೇ ಆಗಿರುವ ಗಜೆಟ್ ನೋಟಿಫಿಕೇಶನ್‌ನ್ನು ಜಾರಿಗೊಳಿ ಸುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಸಹ ನಿರ್ಧರಿಸಲಾಯಿತು ಎಂದ ವರು ಹೇಳಿದರು.
ಇದರೊಂದಿಗೆ ಕರಾವಳಿಯ ರೈತರನ್ನು ಒಗ್ಗೂಡಿಸಿ, ಅವರಿಗೆ ಈ ಬಗ್ಗೆ ಅರಿವು ಮೂಡಿ ಸುವುದಲ್ಲದೆ, ಕುಮ್ಕಿ ಭೂಮಿ ಮೇಲಿನ ತಮ್ಮ ಹಕ್ಕುಗಳಿಗಾಗಿ ಆಂದೋಲನವನ್ನು ಹಮ್ಮಿ ಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ರಾಜ್ಯ ಸರಕಾರವೇ ನೀಡಿದ ಅಂಕಿಅಂಶ ದಂತೆ ಉಡುಪಿ ಜಿಲ್ಲೆಯಲ್ಲಿ 1,97,401 ಹಾಗೂ ದ.ಕ. ಜಿಲ್ಲೆಯಲ್ಲಿ 2,13,304ಕ್ಕೂ ಅಧಿಕ ರೈತರು ಕುಮ್ಕಿ ಭೂಮಿಯನ್ನು ಹೊಂದಿದ್ದಾರೆ ಎಂದ ಅವರು, 1868ನೆ ಇಸವಿ(1276ನೆ ಪಸಲಿ)ಯವರೆಗೆ ಕದೀಂ ವರ್ಗ ಭೂಮಿಯನ್ನು ಹೊಂದಿರುವವರಿಗೆ ಕುಮ್ಕಿ ಭೂಮಿಯನ್ನು ಮದ್ರಾಸ್ ಬೋರ್ಡ್ ಸ್ಟಾಂಡಿಗ್ ಆರ್ಡರ್ ಅಡಿಯಲ್ಲಿ 1896ರ ಕುಮ್ಕಿ ನಿಯಮಗಳಂತೆ ನೀಡಲಾದ ಹಕ್ಕಿನ ಭೂಮಿಯಾಗಿದೆ ಎಂದರು. ಇದರಂತೆ ವರ್ಗದಾರನು ತನ್ನ ಭೂಮಿಗೆ ಹೊಂದಿಕೊಂಡಿರುವ ಸರಕಾರಿ ಅನುಭೋಗ ರಹಿತ ಅರಣ್ಯ ಪಾಳು ಭೂಮಿಯಲ್ಲಿ 100 ಗಜ ದೂರದವರೆಗೆ, ತನ್ನ ವರ್ಗ ಭೂಮಿಯ ವಿಸ್ತೀರ್ಣದ ಎರಡು ಪಟ್ಟು ಮೀರದಂತೆ ಕುಮ್ಕಿ ಭೂಮಿಯನ್ನು ಹೊಂದಬಹುದಾಗಿದೆ. ಈ ಭೂಮಿಯಲ್ಲಿ ದೊರೆಯುವ ಸೊಪ್ಪು, ತರಗಲೆ, ಸೌದೆ ಸಂಗ್ರಹಿಸುವುದು, ಕೃಷಿ ಹಾಗೂ ಗೃಹ ಉಪಯೋಗಿ ಉದ್ದೇಶಗಳಿಗಾಗಿ ಮರ ಮತ್ತು ಇತರ ಅರಣ್ಯ ಉತ್ಪತ್ತಿಗಳನ್ನು ಬಳಸುವುದಕ್ಕೆ ರೈತರಿಗೆ ನೀಡಿದ ವಿಷೇಶಾ ಧಿಕಾರ ಅಥವಾ ಹಕ್ಕಾಗಿದೆ ಎಂದರು.
1973ರವರೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಕುಮ್ಕಿ ಭೂಮಿಯನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ, ದರ್ಖಾಸ್ತಾಗಿ ನೀಡಲಾಗುತಿತ್ತು. 1971ರಲ್ಲಿ ಉದ್ಭವಿಸಿದ ಒಂದು ವಿವಾದದ ಪರಿಣಾಮ ಸರಕಾರ,ಕುಮ್ಕಿ ಭೂಮಿಯನ್ನು ದರ್ಖಾಸ್ತಿಗೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಯಿತು. 1973ರಲ್ಲಿ ಇನ್ನೊಂದು ಸುತ್ತೋಲೆಯನ್ನು ಹೊರಡಿಸಿದ ಕಂದಾಯ ಕಾರ್ಯದರ್ಶಿ ಸೂಕ್ತ ನಿಯಮ ರಚಿಸುವವರೆಗೆ ಕುಮ್ಕಿ ಮೊದಲಾದ ಭೂಮಿ ಗಳನ್ನು ದರ್ಖಾಸ್ತು ನೀಡದಂತೆ ತಿಳಿಸಿದ್ದು, ಇದರಿಂದ ಕಳೆದ 43 ವರ್ಷಗಳಿಂದ ಈ ಭೂಮಿಯನ್ನು ಪಟ್ಟಾಕ್ಕೆ ನೀಡುವ ಕ್ರಮವನ್ನು ತಡೆಹಿಡಿದಿದೆ ಎಂದರು. ಇದರ ವಿರುದ್ಧ ಹಾಗೂ ಪರವಾಗಿ ಅನೇಕ ತೀರ್ಪುಗಳು ನ್ಯಾಯಾಲಯ ಗಳಿಂದ ಹೊರ ಬಂದಿರುವ ಕಾರಣ ಕುಮ್ಕಿದಾರರು ಗೊಂದಲ ದಲ್ಲಿದ್ದಾರೆ. 1976ರಲ್ಲಿ ಸರ್ವೋಚ್ಚ ನ್ಯಾಯಾ ಲಯ ಚಂದ್ರಶೇಖರ ಅಡಿಗ ಹಾಗೂ ಸರಕಾರದ ನಡುವಿನ ವ್ಯಾಜ್ಯದಲ್ಲಿ, ಕುಮ್ಕಿ ಹಕ್ಕನ್ನು ಅಧಿಕಾರಿಗಳ ಆದೇಶದಿಂದ ರದ್ದು ಪಡಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಉತ್ತರ ನೀಡಿದೆ. ಆದರೆ ಇತ್ತೀಚೆಗೆ ಕೆ. ಶ್ಯಾಮ ಭಟ್ಟ ಹಾಗೂ ಸರಕಾರ ಮತ್ತಿತರರ ನಡುವೆ ನಡೆದ ವ್ಯಾಜ್ಯದ ತೀರ್ಪಿನಲ್ಲಿ ಜಿಲ್ಲಾಧಿಕಾರಿಗಳ ಅಧಿ ಕಾರವನ್ನು ಎತ್ತಿಹಿಡಿದಿದೆ ಎಂದರು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಕಿಸಂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ.ಕೆ.ರಮೇಶ್ ಮಾತನಾಡಿದರು. ಭಾಕಿಸಂ ಜಿಲ್ಲಾ ಧ್ಯಕ್ಷ ಬಿ.ವಿ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಜಿಲ್ಲಾ ಕೋಶಾಧಿ ಕಾರಿ ವಾಸುದೇವ ಶ್ಯಾನುಭಾಗ್ ಉಪಸ್ಥಿತ ರಿದ್ದರು. ಜಿಲ್ಲೆಯ ಬೇರೆ ಬೇರೆ ಭಾಗದಿಂದ ಬಂದ ರೈತರು ಸಭೆಯಲ್ಲಿ ಭಾಗವಹಿಸಿದ್ದರು.
ಕುಮ್ಕಿ ಹಕ್ಕಿಗಾಗಿ ಆರು ಲಕ್ಷ ರೈತರ ಹೋರಾಟ ಪ್ರಸ್ತುತ ಕುಮ್ಕಿ, ಕಾನ, ಬಾಣೆ, ಹಾಡಿ ಹಾಗೂ ಸೊಪ್ಪಿನ ಬೆಟ್ಟ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಕುಮ್ಕಿ ಭೂಮಿ ರಾಜ್ಯದ ಮಲೆನಾಡು ಹಾಗೂ ಕರಾವಳಿ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ವ್ಯಾಪಿಸಿವೆ. ಒಟ್ಟಾರೆಯಾಗಿ ಆರು ಲಕ್ಷಕ್ಕೂ ಅಧಿಕ ರೈತರು ಈ ಹಕ್ಕಿನ ಭೂಮಿಗಾಗಿ ಕಳೆದ 150 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ.
-ಸತ್ಯನಾರಾಯಣ ಉಡುಪ, ಭಾಕಿಸಂ ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ







