ಕುಮ್ಕಿ ಹಕ್ಕಿನ ದುರುಪಯೋಗವಾದಲ್ಲಿ ಕಾನೂನು ಕ್ರಮ: ಜಿಲ್ಲಾಧಿಕಾರಿ

ಪುತ್ತೂರು, ಜ.21: ಕುಮ್ಕಿ ಹಕ್ಕಿನ ಮೂಲ ಉದ್ದೇಶವನ್ನು ಉಲ್ಲಂಘಿಸಿ ರೈತರು ದುರು ಪಯೋಗಪಡಿಸಿಕೊಳ್ಳುತ್ತಿರುವುದು ಕಂಡುಬರುತ್ತಿದ್ದು, ಸಾರ್ವಜನಿಕ ಉದ್ದೇಶಗಳಿಗೆ ಅಗತ್ಯವೆನಿಸಿದಲ್ಲಿ ನೋಟಿಸ್ ಜಾರಿಗೊಳಿಸಿ ಕುಮ್ಕಿ ಹಕ್ಕನ್ನು ವಿರಹಿತಗೊಳಿಸಲಾಗು ವುದು. ಕುಮ್ಕಿ ವಿಚಾರದಲ್ಲಿ ಪರಿಹಾರದ ಪ್ರಶ್ನೆಯೇ ಬರುವುದಿಲ್ಲ ಎಂದು ಜಿಲ್ಲಾಧಿ ಕಾರಿ ಎ.ಬಿ.ಇಬ್ರಾಹೀಂ ಸ್ಪಷ್ಟಪಡಿಸಿದ್ದಾರೆ. ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿಂದು ಸಾರ್ವಜನಿಕರಿಂದ ಅಹ ವಾಲು ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಹಲವಾರು ಪ್ರಕರಣಗಳಲ್ಲಿ ಶಾಲೆ, ಅಂಗನವಾಡಿ ಮೊದಲಾದ ಸಾರ್ವಜನಿಕ ಉದ್ದೇಶಗಳಿಗಾಗಿ ಈಗಾಗಲೇ ಕುಮ್ಕಿ ಭೂಮಿಯನ್ನು ವಿರಹಿತಗೊಳಿಸಲಾಗಿದೆ. ಮುಂದೆ ನಿವೇಶನರಹಿತರಿಗೆ ಹಂಚಲು ಕುಮ್ಕಿ ಭೂಮಿಯನ್ನು ಬಳ ಸುವ ಪ್ರಕ್ರಿಯೆ ನಡೆಯಲಿದೆ ಎಂದವರು ತಿಳಿಸಿದರು.
ಇಂದು ಹೆಚ್ಚಿನ ಕಡೆಗಳಲ್ಲಿ ಕುಮ್ಕಿ ಸವಲತ್ತನ್ನು ಕೃಷಿಯ ಸೌಲಭ್ಯವಾಗಿ ಪರಿಗಣಿಸದೆ ಕೃಷಿ ಭೂಮಿಯಾಗಿ ಪರಿವರ್ತಿಸಲಾಗಿದೆ. ಕುಮ್ಕಿಯಲ್ಲೇ ಮನೆ ಕಟ್ಟಡ, ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಯಾವ ಉದ್ದೇಶಕ್ಕಾಗಿ ಕುಮ್ಕಿ ಭೂಮಿ ಇರಬೇ ಕಾಗಿತ್ತೋ ಆ ಉದ್ದೇಶವೇ ಬದಲಾಗಿದೆ ಎಂದು ಅವರು ಹೇಳಿದರು.
ಮರಳುಗಾರಿಕೆ ನಿಷೇಧ: ನೇತ್ರಾವತಿ, ಕುಮಾರಧಾರಾ, ಫಲ್ಗುಣಿ ಮತ್ತು ಪಯಸ್ವಿನಿ ನದಿ ಸೇತುವೆಗಳ ವಠಾರದ 500 ಮೀ. ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಆದರೆ ಅನುಮತಿ ಪಡೆದು ಅಂತರ್ ಜಿಲ್ಲೆಗಳಿಗೆ ಮರಳು ಸಾಗಿಸಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಫೆಬ್ರವರಿಯಲ್ಲಿ ‘ಪುತ್ತೂರು ಉತ್ಸವ’: ಕರಾವಳಿ ಉತ್ಸವ ಪುತ್ತೂರಿನಲ್ಲಿ ನಡೆಯದಿರುವ ಕುರಿತು ಸುದ್ದಿಗಾರರು ಪ್ರಶ್ನಿಸಿ ದಾಗ ಈ ವರ್ಷದಿಂದಲೇ ಕರಾವಳಿ ಉತ್ಸವವನ್ನು ಪುತ್ತೂರಿನಲ್ಲಿ ನಡೆಸುವಂತೆ ಉಪವಿಭಾಗಾಧಿಕಾರಿಗೆ ಅವರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಫೆಬ್ರವರಿಯಲ್ಲಿ ಕರಾವಳಿ ಉತ್ಸವವನ್ನು ‘ಪುತ್ತೂರು ಉತ್ಸವ’ವಾಗಿ ನಡೆಸಲಾಗುವುದು ಎಂದರು.
ತಹಶೀಲ್ದಾರ್ ಸಣ್ಣರಂಗಯ್ಯ ಉಪಸ್ಥಿತರಿದ್ದರು.







