ದಲಿತ ವಿದ್ಯಾರ್ಥಿ ಆತ್ಮಹತ್ಯೆ ವಿರೋಧಿ ಧರಣಿಯಲ್ಲಿ ದಿಲ್ಲಿ ಮುಖ್ಯಮಂತ್ರಿ

ಹೈದರಾಬಾದ್: ಹೈದರಾಬಾದ್ ವಿವಿಯಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಾಥ್ ನೀಡಿದ್ದಾರೆ.
ದೌರ್ಜನ್ಯದಿಂದ ನೊಂದು ದಲಿತ ವಿದ್ಯಾರ್ಥಿಯು ಆತ್ಮಹತ್ಯೆ ನಡೆಸಿದ ಪ್ರಕರಣವನ್ನು ರಾಷ್ಟ್ರೀಯ ಅವಮಾನವೆಂದು ಅವರು ಕರೆದಿದ್ದಾರೆ. ಕೇಂದ್ರ ಸರಕಾರವು ಜಾತಿಯಾಧಾರಿತ ರಾಜಕೀಯವನ್ನು ಅನುಷ್ಠಾನಗೊಳಿಸಲು ಹವಣಿಸುತ್ತಿದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ವಿರುದ್ಧ ಕೇಜ್ರಿವಾಲ್ ಟೀಕಾ ಪ್ರಹಾರವನ್ನೇ ಹರಿಸಿದ್ದಾರೆ. ರೋಹಿತ್ ವೇಮುಲಾ ನಿಧನಕ್ಕೆ ಸಂಬಂಧಿಸಿ ಆಕೆ ನೀಡಿದ್ದ ಹೇಳಿಕೆಗಳು ಹಾಗೂ ವಿವಿ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿಯನ್ನು ಜಾತಿ ವಿಷಯವನ್ನಾಗಿಸಲು ಕೈಗೊಂಡ ಹುನ್ನಾರ ಎಂದು ಕರೆದಿರುವುದಕ್ಕೆ ಕ್ಷಮೆಯಾಚಿಸುವಂತೆ ಸಚಿವೆಯನ್ನು ಅವರು ಆಗ್ರಹಿಸಿದ್ದಾರೆ.
‘‘ರೋಹಿತ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಆತ ದಲಿತನಾಗಿದ್ದರೂ, ಮೀಸಲಾತಿ ಕೋಟಾದಿಂದ ಸೀಟ್ ಗಿಟ್ಟಿಸಿಕೊಳ್ಳದೆ ಮೆರಿಟ್ ಆಧಾರದಲ್ಲಿಯೇ ಪ್ರವೇಶವನ್ನು ಪಡೆದುಕೊಂಡಿದ್ದ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ನಿಜಕ್ಕೂ ಸಂಪೂರ್ಣ ದೇಶ ಹಾಗೂ ಸಮಾಜಕ್ಕೊಂದು ಕಪ್ಪುಚುಕ್ಕೆ ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ವಿವಿಯ ಉಪಕುಲಪತಿಯನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘಟನೆ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿಗೆ ಪತ್ರ ಬರೆದಿರುವುದು ವಿಚಾರಣೆ ನಡೆಸದೆಯೇ ತೀರ್ಮಾನಕ್ಕೆ ಬಂದಿರುವುದಕ್ಕೆ ಜ್ವಲಂತ ನಿದರ್ಶನ ಎಂದರು.
ಅಂಬೇಡ್ಕರ್‌ರವರ ಚಿಂತನೆಗಳನ್ನು ಚರ್ಚಿಸಿದ ಮಾತ್ರಕ್ಕೆ ಯಾರೊಬ್ಬನೂ ಜಾತಿವಾದಿಯಾಗಲು ಅಥವಾ ರಾಷ್ಟ್ರದ್ರೋಹಿಯಾಗಲು ಸಾಧ್ಯವೇ ಇಲ್ಲ. ಇದರಲ್ಲಿ ರಾಷ್ಟ್ರೀಯತೆಗಿಂತ ಹೆಚ್ಚಿನದೇನೂ ಇಲ್ಲ ಎಂದರು.
ಘಟನೆಯ ಬಗ್ಗೆ ಅಸಮರ್ಪಕ ಹೇಳಿಕೆಯನ್ನು ನೀಡುವ ಮೂಲಕ ದೇಶವನ್ನು ತಪ್ಪು ದಾರಿಗೆ ಕೊಂಡೊಯ್ಯಲು ಇರಾನಿ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೀಳುಮಟ್ಟದ ಹೇಳಿಕೆಗಳನ್ನು ಇರಾನಿ ನೀಡುತ್ತಿದ್ದಾರೆ. ಆಕೆ ಸುಳ್ಳಿನ ಮೇಲೆ ಸುಳ್ಳನ್ನು ಹೇಳುತ್ತಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಯ ಜಾತಿಯ ಬಗ್ಗೆ ಗೊಂದಲ ಸೃಷ್ಟಿಸಲೂ ಆಕೆ ಯತ್ನಸುತ್ತಿದ್ದಾರೆ ಎಂದು ಆಪಾದಿಸಿದರು.
ದೇಶದಲ್ಲಿ ಗಲಭೆಯ ಕಿಚ್ಚು ಹೆಚ್ಚಿಸುವ ಸಲುವಾಗಿ ಪ್ರಕರಣವನ್ನು ದಲಿತ-ದಲಿತೇತರ ಸಂಘರ್ಷವಾಗಿಸಲು ಕೆಲವರು ಯತ್ನಿಸುತ್ತಿದ್ದಾರೆ ಎಂದು ಇರಾನಿ ನಿನ್ನೆ ಆರೋಪಿಸಿದ್ದರು. ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದ ಕೇಜ್ರಿವಾಲ್, ಸಂಪೂರ್ಣ ದೇಶವೇ ನಿಮ್ಮ ಜೊತೆಗಿದೆ. ನ್ಯಾಯವನ್ನು ಕಲ್ಪಿಸಿಕೊಡುವುದನ್ನು ಖಾತ್ರಿಪಡಿಸಲು ಅಗತ್ಯವಾದ ಎಲ್ಲವನ್ನೂ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸ್ಮತಿ ಇರಾನಿಯಿಂದ ಸುಳ್ಳಿನ ಸರಮಾಲೆ: ಕೇಜ್ರಿವಾಲ್ ವಾಗ್ದಾಳಿ
ಹೈದರಾಬಾದ್ ವಿವಿ ವಿವಾದ
ಹೈದರಾಬಾದ್, ಜ.21: ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಆಗಮಿಸಿದ್ದು, ದಲಿತ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಯ ವಿಚಾರದಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆ ಸ್ಮತಿ ಇರಾನಿಯವರ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಚಿವೆ, ಒಂದರ ಹಿಂದೊಂದು ಸುಳ್ಳನ್ನು ಆಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಕೇಜ್ರಿವಾಲ್, ಸ್ಮತಿ ಇರಾನಿಜಿ ಒಂದರ ನಂತರ ಒಂದು ಸುಳ್ಳು ಹೇಳುತ್ತಿದ್ದಾರೆ,. ರೋಹಿತ್‌ರ ಜಾತಿಯ ಕುರಿತು ವಿವಾದ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದರು. ಅವರು ರೋಹಿತ್‌ರ ಹೆತ್ತವರನ್ನೂ ಭೇಟಿಯಾಗಲಿದ್ದಾರೆ.
ರೋಹಿತ್‌ರ ಸಾವನ್ನು ‘ಪ್ರಜಾಪ್ರಭುತ್ವದ ಕೊಲೆ’ ಎಂದು ವ್ಯಾಖ್ಯಾನಿಸಿದ ಕೇಜ್ರಿವಾಲ್, ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣರಾಗಿರುವ ಸ್ಮತಿ ಇರಾನಿ ಹಾಗೂ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಬಂಡಾರು ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ಸಚಿವರೊಬ್ಬರು ತನ್ನ ಪತ್ರದಲ್ಲಿ, ವಾಸ್ತವಾಂಶಗಳ ಬಗ್ಗೆ ವಿಚಾರಣೆ ನಡೆಸದೆ, ಉಗ್ರಗಾಮಿ, ಜಾತಿವಾದಿ ಹಾಗೂ ರಾಷ್ಟ್ರ-ವಿರೋಧಿ ಇತ್ಯಾದಿ ಶಬ್ದಗಳನ್ನು ಉಪಯೋಗಿಸಿರುವುದು ‘ನಾಚಿಕೆಗೇಡು’ ಎಂದರು. ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ದೇಶದ ಕ್ಷಮೆ ಕೋರಬೇಕೆಂದು ಅವರು ಆಗ್ರಹಿಸಿದರು.







