ದಲಿತ ವಿದ್ಯಾರ್ಥಿಗಳ ಅಮಾನತು ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾದ ವಿವಿ
ಸತ್ಯಶೋಧನಾ ಸಮಿತಿ ವರದಿ
ಹೈದರಾಬಾದ್: ದಲಿತ ವಿದ್ಯಾರ್ಥಿಗಳ ಅಮಾನತಿಗೆ ಸಂಬಂಧಿಸಿ, ಉಂಟಾಗಿದ್ದ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಹೈದರಾಬಾದ್ ವಿವಿಯ ಆಡಳಿತ ಮಂಡಳಿಯು ಲೋಪವೆಸಗಿದೆಯೆಂದು ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾನ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದ್ವಿಸದಸ್ಯ ಸತ್ಯಶೋಧನಾ ಸಮಿತಿ ಅಭಿಪ್ರಾಯಿಸಿದೆ.
ಕೇಂದ್ರ ಮಾನವಸಂಪನ್ಮೂಲ ಇಲಾಖೆ ರಚಿಸಿದ ಈ ಸಮಿತಿಯು ತನ್ನ ವರದಿಯನ್ನು ಶನಿವಾರದೊಳಗೆ ಸಲ್ಲಿಸುವ ನಿರೀಕ್ಷೆಯಿದೆ. ಈ ವರದಿಯನ್ನು ಆಧರಿಸಿ, ಸಚಿವಾಲಯವು ವಿವಿ ಕುಲಪತಿ ಪ್ರೊ. ಅಪ್ಪಾರಾವ್ ಅವರನ್ನು ಉಚ್ಚಾಟಿಸುವ ಸಾಧ್ಯತೆಯಿದೆಯೆನ್ನಲಾಗಿದೆ.
ಅಪ್ಪಾರಾವ್, 2001ರಿಂದ 2004ರ ನಡುವೆ ವಿವಿ ಕ್ಯಾಂಪಸ್‌ನ ಮುಖ್ಯವಾರ್ಡನ್ ಆಗಿದ್ದಾಗಲೇ, ಅವರ ವಿರುದ್ಧ ದಲಿತ ವಿದ್ಯಾರ್ಥಿಗಳಲ್ಲಿ ಬಲವಾದ ಅಸಮಾಧಾನವಿತ್ತು. ವಿವಿಯ ಹಾಸ್ಟೆಲ್ ಹಾಗೂ ಭೋಜನಗೃಹಗಳಲ್ಲಿ, ಅಪ್ಪಾರಾವ್ ದಲಿತ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು.
ಕಳೆದ ಸೆಪ್ಟೆಂಬರ್‌ನಲ್ಲಿ ವಿವಿ ಕ್ಯಾಂಪಸ್‌ನಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಬಳಿಕ ರೋಹಿತ್ ವೇಮುಲಾ ಸಹಿತ ಐವರು ದಲಿತ ವಿದ್ಯಾರ್ಥಿಗಳ ಅಮಾನತು ಪ್ರಕರಣವು ಅಪ್ಪಾರಾವ್ ವಿರುದ್ಧದ ಆರೋಪಗಳಿಗೆ ಪುಷ್ಟಿ ನೀಡಿದ್ದವು.
‘ಶಿಕ್ಷೆ’ಯ ಪ್ರಮಾಣ ಕಡಿತಗೊಳಿಸಿದ್ದೆ; ಉಪಕುಲಪತಿ: ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಬಳಿಕ, ವಿವಾದದ ಸುಳಿಗೆ ಸಿಲುಕಿರುವ ಅಪ್ಪಾರಾವ್ ತಾನೋರ್ವ ಬಿಜೆಪಿ ಬೆಂಬಲಿಗನೆಂಬುದನ್ನು ನಿರಾಕರಿಸಿದ್ದಾರೆ. ಸಾಮಾನ್ಯ ಆಯ್ಕೆ ಪ್ರಕ್ರಿಯೆ ಮೂಲಕ, ಅರ್ಹತೆಯ ಆಧಾರದಲ್ಲಿ ನೇಮಕಗೊಂಡಿದ್ದಾಗಿ ಹೇಳುತ್ತಾರೆ. ತಾನು ಕೇಂದ್ರ ಸಚಿವರೊಬ್ಬರು ತನ್ನನ್ನು ಉಪಕುಲಪತಿ ಹುದ್ದೆಗೆ ಶಿಫಾರಸು ಮಾಡಿದ್ದಾರೆಂಬುದನ್ನು ಅವರು ಅಲ್ಲಗಳೆದಿದ್ದಾರೆ.
ಉಪಕುಲಪತಿಯ ಆಯ್ಕೆ ಎನ್‌ಡಿಎ ಅವಧಿಯಲ್ಲಿ ನಡೆದಿರುವುದು ಕೇವಲ ಕಾಕತಾಳೀಯವಷ್ಟೇ. ವಿವಿಯ ವರಿಷ್ಠನಾಗಿರುವುದರಿಂದ, ಜನರು ನನ್ನನ್ನು ವೇಮುಲಾರ ಸಾವಿಗೆ ಹೊಣೆಗಾರನೆಂದು ತಪ್ಪಾಗಿ ಭಾವಿಸಿದ್ದಾರೆ’’ ಎಂದವರು ಹೇಳಿದ್ದಾರೆ.
ಅಮಾನತುಗೊಂಡಿದ್ದ ವಿದ್ಯಾರ್ಥಿಗಳ ಬಗ್ಗೆ ತಾನು ಉದಾರವಾಗಿ ವರ್ತಿಸಿದ್ದೆ. ಮೇಲ್ವಿಚಾರಣಾ ಸಮಿತಿಯ ಶಿಫಾರಸನ್ನು ಮೀರಿ, ತಾನು ಅವರಿಗೆ ವಿಧಿಸಲಾಗಿದ್ದ ದಂಡನೆಯ ಪ್ರಮಾಣವನ್ನು ಕಡಿತಗೊಳಿಸಿದ್ದಾಗಿ ಅಪ್ಪಾರಾವ್ ತಿಳಿಸಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಎಬಿವಿಪಿ ನಾಯಕ ಎನ್.ಸುಶೀಲ್ ಕುಮಾರ್ ಅವರ ತಾಯಿ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಯಾವ ಕ್ರಮಕೈಗೊಳ್ಳಲಾಗಿದೆಯೆಂದು ತಿಳಿಸುವಂತೆ ಹೈಕೋರ್ಟ್ ಆದೇಶಿಸಿತ್ತು. ಇದರಿಂದಾಗಿ ಪರಿಸ್ಥಿತಿ ಗಂಭೀರಗೊಂಡು, ವಿವಿಯು ಅನಿವಾರ್ಯವಾಗಿ ಕ್ರಮಕ್ಕೆ ಮುಂದಾಗಬೇಕಾಯಿತೆಂದು ಅಪ್ಪಾರಾವ್ ಹೇಳಿದ್ದಾರೆ.
ಹೈಕೋರ್ಟ್ ಒತ್ತಡದಿಂದಾಗಿ, ವಿವಿಯು ಕಾರ್ಯಾನುಷ್ಠಾನ ವರದಿಯನ್ನು ಸಲ್ಲಿಸಬೇಕಾಯಿತು ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಐವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಬೇಕಾಯಿತೆಂದು ಅವರು ಹೇಳಿದ್ದಾರೆ.







