ಇರಾನಿ,ದತ್ತಾತ್ರೇಯ ಪದಚ್ಯುತಿಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ: ಹೈದರಾಬಾದ್ ವಿವಿಯಲ್ಲಿ ಸಂಶೋಧನಾ ವಿಭಾಗದ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಚಾಟಿ ಬೀಸಿದೆ.
ಘಟನೆಗೆ ಕಾರಣರಾದವರು ಎಂದು ಹೇಳಲಾಗುತ್ತಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಸ್ಮತಿ ಇರಾನಿ ಹಾಗೂ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯರನ್ನು ತಕ್ಷಣದಲ್ಲಿಯೇ ಪದಚ್ಯುತಿಗೊಳಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಎಬಿವಿಪಿ ನಾಯಕನನ್ನು ಬಚಾವ್ ಮಾಡಲು ಇರಾನಿ ಇಲ್ಲ-ಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ತಪ್ಪು ಮಾಹಿತಿಗಳನ್ನು ಪಸರಿಸುವ ಮೂಲಕ ರಾಷ್ಟ್ರವನ್ನು ತಪ್ಪುದಾರಿಗೆ ಕೊಂಡೊಯ್ಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖ್ಯವಕ್ತಾರ ರಣ್‌ದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಈ ಹಿಂದೆ ವಿದ್ಯಾರ್ಥಿಗಳಿಂದ ದಾಳಿಗೊಳಗಾಗಿದ್ದ ಎಬಿವಿಪಿ ನಾಯಕನೂ ಹಿಂದುಳಿದ ವರ್ಗಕ್ಕೆ ಸೇರಿದವನಾಗಿದ್ದನು ಎಂದು ಇರಾನಿ ಹೇಳಿದ್ದರು.
ರೋಹಿತ್ ವೇಮುಲಾ ಹಾಗೂ ಇತರೆ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ನಡೆದ ಅನ್ಯಾಯವನ್ನು ಸಚಿವೆ ಇರಾನಿ ಸಮರ್ಥಿಸಿಕೊಂಡಿದ್ದಾರೆ.
ಎಲ್ಲಾ ವಿವಿಗಳ ಕಸ್ಟೋಡಿಯನ್ ಆಗಿರುವ ಅವರು ದೇಶಕ್ಕೆ ಸುಳ್ಳುಹೇಳುವ ಮೂಲಕ ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಸುಳ್ಳುಗಳ ಮೇಲೆ ಸುಳ್ಳುಗಳ ಕಂತೆಯನ್ನೇ ಆಕೆ ಹೇಳುತ್ತಿದ್ದಾರೆ ಎಂದು ಸುರ್ಜೇವಾಲಾ ಟೀಕಿಸಿದ್ದಾರೆ.







