ರಾಷ್ಟ್ರೀಯ ಅವಮಾನ: ಶರದ್ ಯಾದವ್
ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ
ಹೊಸದಿಲ್ಲಿ: ಹೈದರಾಬಾದ್‌ನ ಕೇಂದ್ರೀಯ ವಿವಿಯಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಶರಣಾದ ಪ್ರಕರಣವು ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ದಲಿತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಗಳನ್ನು ವಿವಿಧ ರಾಜಕೀಯ ಪಕ್ಷದ ನಾಯಕರು ಒಕ್ಕೊರಳಿನಿಂದ ಖಂಡಿಸಿದ್ದಾರೆ.
ಆ ಸಮುದಾಯದ ಜೊತೆ ತಾವಿದ್ದೇವೆ ಎಂಬುದನ್ನು ಸಾದರಪಡಿಸಲು ಶತಾಯಗತಾಯ ಶ್ರಮಿಸುತ್ತಿದ್ದಾರೆ. ಇದೀಗ ಪ್ರಕರಣದ ಬಗ್ಗೆ ಜೆಡಿಯು ವರಿಷ್ಠ ಶರದ್ ಯಾದವ್ ಧ್ವನಿಯೆತ್ತಿದ್ದು, ಘಟನೆಯನ್ನು ರಾಷ್ಟ್ರೀಯ ಅವಮಾನವೆಂದು ಬಣ್ಣಿಸಿದ್ದಾರೆ. ಸಮಾಜದ ಕೆಳಸ್ತರದ ವಿದ್ಯಾರ್ಥಿಗಳ ಹಿತಾಸಕ್ತಿಯ ವಿರುದ್ಧವಾಗಿ ಸರಕಾರ ನಡೆದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇತರೆ ಹಿಂದುಳಿದ ವರ್ಗ(ಒಬಿಸಿ)ದ ವಿದ್ಯಾರ್ಥಿಗಳಿಗೆ ಮೀಸಲಾಗಿರುವ 27 ಶೇಕಡಾ ಸೀಟ್‌ಗಳನ್ನು ತುಂಬುವಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಯುಜಿಸಿ ವಿಫಲವಾಗಿರುವುದಕ್ಕೆ ಅವರು ಈ ಸಂದರ್ಭದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು. ದಲಿತರು ಹಾಗೂ ಹಿಂದುಳಿದ ವರ್ಗದವರ ವಿರುದ್ಧ ದೇಶದಲ್ಲಿ ದೌರ್ಜನ್ಯಗಳು ನಡೆಯುತ್ತಿರುವುದು ಹೊಸದೇನಲ್ಲ. ಆದರೆ ಇಂತಹ ಘಟನೆಗಳು ವಿಶ್ವವಿದ್ಯಾನಿಲಯಗಳಲ್ಲಿಯೂ ಮರುಕಳಿಸುತ್ತಿರುವುದು ಆತಂಕಕಾರಿ ವಿಚಾರ ಎಂದು ಅವರು ಹೇಳಿದ್ದಾರೆ.





