ಮದ್ಯದ ಮೇಲೆ ಗೋ ಸುಂಕ: ಹರ್ಯಾಣ ಸಚಿವ ವಿರೋಧ

ಚಂಡೀಗಢ: ಹರ್ಯಾಣದಲ್ಲಿ ಗೋವುಗಳ ಕಲ್ಯಾಣಕ್ಕಾಗಿ ಪ್ರತಿ ಮದ್ಯದ ಬಾಟಲಿಗಳ ಮೇಲೆ ಎರಡು ರೂಪಾಯಿ ಶುಲ್ಕ ವಿಧಿಸುವಂತೆ ರಾಜ್ಯ ಗೋ ಆಯೋಗ ನೀಡಿದ ಶಿಫಾರಸ್ಸಿಗೆ ಸಚಿವ ಅನಿಲ್ ವಿರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮದ್ಯ ಹಾಗೂ ಗೋವು ಜತೆಜತೆಗೆ ಸಾಗಲು ಸಾಧ್ಯವಿಲ್ಲ. ಮದ್ಯದಿಂದ ಪಡೆದ ಹಣವನ್ನು ಗೋ ಕಲ್ಯಾಣಕ್ಕೆ ಬಳಸುವುದು ಸರಿಯಲ್ಲ. ಜನರು ಇದನ್ನು ಖಂಡಿತಾಗಿಯೂ ಸ್ವೀಕರಿಸಲಾರರು ಎಂದು ಅವರು ಹೇಳಿದರು. ಇದು ಇನ್ನೂ ಕೇವಲ ಪ್ರಸ್ತಾವನೆಯಾಗಿದ್ದು ಸರ್ಕಾರ ಈ ಬಗ್ಗೆ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಪಕ್ಷ ಹಾಗೂ ಸರ್ಕಾರ ಈ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತೊಬ್ಬ ಸಚಿವರೂ ಈ ಪ್ರಸ್ತಾವವನ್ನು ವಿರೋಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಸುಂಕದ ಮೂಲಕ 500 ಕೋಟಿ ರೂಪಾಯಿಗಳನ್ನು ವಾರ್ಷಿಕವಾಗಿ ಸಂಗ್ರಹಿಸುವ ಬಗ್ಗೆ ಆಯೋಗ ಶಿಫಾರಸ್ಸು ಮಾಡಿತ್ತು. ರಾಜ್ಯದದಲ್ಲಿ 400ಕ್ಕೂ ಹೆಚ್ಚು ಶೆಡ್‌ಗಳಲ್ಲಿ ಇರುವ ಮೂರು ಲಕ್ಷ ಹಸುಗಳ ಪಾಲನೆಗೆ ಈ ಹಣ ಬಳಸಿಕೊಳ್ಳಬಹುದು ಎಂದು ಆಯೋಗ ಸಲಹೆ ಮಾಡಿತ್ತು.
"ಇದು ಮದ್ಯಪಾನಕ್ಕೆ ಉತ್ತೇಜನ ನೀಡುವ ಅಪಾಯವೂ ಇದೆ" ಎಂದು ಕೆಲ ಬಿಜೆಪಿ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ತಾವು ಗೋಸಂರಕ್ಷಣೆಗೆ ಕೊಡುಗೆ ನೀಡುತ್ತಿದ್ದೇವೆ ಎಂಬ ಭಾವನೆಯೊಂದಿಗೆ ಹೆಚ್ಚು ಕುಡಿಯಲು ಇದು ಕಾರಣವಾಗಬಹುದು ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಈ ಮುನ್ನ ವಿಜ್ ಅವರು ಹಸುವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವಂತೆ ಒತ್ತಾಯಿಸಿದ್ದರು. ಭಾರತೀಯ ಗೋತಳಿಗಳ ಮೇಲೆ ದಾಳಿ ಮಾಡುವ ಮಾಫಿಯಾ ಸಕ್ರಿಯವಾಗಿರುವುದರಿಂದ ಹಸು ಕೂಡಾ ವಿನಾಶದ ಅಂಚು ತಲುಪಬಹುದು ಎಂದು ಅವರು ಹೇಳಿದ್ದಾರೆ.







