ಸಿರಿ - ಸ್ತ್ರೀತ್ವದ ಸ್ವಾಯತ್ತ ಶಕ್ತಿಯ ಸಂಕೇತ

ತುಳುನಾಡಿನ ಹೆಣ್ಣುಮಕ್ಕಳಿಗೆ ‘ಸಿರಿ’ ಐಕಾನ್ ಆಗಿದ್ದಾಳೆ. ಹೆಣ್ಣೊಬ್ಬಳ ಆತ್ಮಾಭಿಮಾನ ಮತ್ತು ಗೌರವವನ್ನು ಎತ್ತರಿಸಿ ಬಿತ್ತರಿಸಿದ ಹಿರಿಮೆ ಅವಳದು. ತನ್ನ ವೈಯಕ್ತಿಕ ಬದುಕಿನ ನಿರ್ಣಯಗಳೂ, ಬಿಕ್ಕಟ್ಟುಗಳನ್ನು ತಂದಿರಿಸಿದಾಗ ಅದನ್ನು ಸಮರ್ಥವಾಗಿ ನಿಭಾಯಿಸಿದವಳು. ಯಾವುದೇ ಪರಿಸ್ಥಿತಿಯಲ್ಲೂ ಸಂಘರ್ಷವು ಕುಟುಂಬ, ಸಮುದಾಯ, ಸಮಾಜದ ಮುಖಾಮುಖಿಯಾದಾಗ ಎಂದೂ ತನ್ನ ವ್ಯಕ್ತಿತ್ವದ ಘನತೆಗೆ ಹಾನಿಯಾಗುವಂತೆ ರಾಜಿ ಮಾಡಿಕೊಂಡವಳಲ್ಲ. ಮೌನವಾಗುವ, ತಲೆಬಾಗುವ, ಸೋತು ಶರಣಾಗುವ, ಹೊಟ್ಟೆಗೆ ಹಾಕಿಕೊಳ್ಳುವ ಪ್ರಸಂಗಗಳಲ್ಲೆಲ್ಲ ದಿಟ್ಟತನದಿಂದ ಎಲ್ಲವನ್ನು ಪ್ರತಿಭಟಿಸಿ ಸಡ್ಡು ಹೊಡೆದು ನಿಂತವಳು. ಎಂದಿಗೂ ಅನ್ಯಾಯದ ದಾರಿಯನ್ನು ತುಳಿಯದೆ ನ್ಯಾಯಪರವಾದ ಮೌಲ್ಯಗಳ ಮೂಲಕ ತಾನು ‘ಸತ್ಯನಾಪುರದ ಸಿರಿ’ ಎನಿಸಿಕೊಂಡವಳು. ಹೆಣ್ಣೆಂದರೆ ಮಿಥ್ಯೆ ಮಾಯೆಯಾಗಿಸದೆ ಸತ್ಯದ ಹೆಗ್ಗುರುತನ್ನು ಸಾಕ್ಷಿ ಪ್ರಜ್ಷೆಯಾಗಿಸಿದವಳು.
ಸಿರಿ ಕಾವ್ಯದಲ್ಲಿ ಬೆರ್ಮ ಆ ಸತ್ಯನಾಪುರದ ಅರಸು, ಅವನು ಕುಲದೈವದ ಹರಕೆ ಹೊತ್ತು ಪಡೆದ ಮಗು ಸಿರಿ. ಬಸರೂರು ಕಾಂತು ಪೂಂಜನೊಂದಿಗೆ ಅವಳ ಮದುವೆಯಾಗುತ್ತದೆ. ಲಂಪಟನಾದ ಗಂಡನಿಂದ ನೀಡಲ್ಪಟ್ಟ ಬಯಕೆಸೀರೆ, ಸೂಳೆ ಸಿದ್ದು ಉಟ್ಟು ಮೈಲಿಗೆಯಾಗಿದೆ; ತಾನು ಸ್ವೀಕರಿಸಲಾರೆ ಎಂದು ಗಂಡ ತಂದ ಬೆಲೆಯುಳ್ಳ ಸೀರೆಯನ್ನು ತಿರಸ್ಕರಿಸಿ ಗಂಡನ ಸ್ವೇಚ್ಛಾಚಾರವನ್ನು ಸಾರ್ವಜನಿಕವಾಗಿ ಪ್ರತಿಭಟಿಸುತ್ತಾಳೆ. ಅಜ್ಜನ ಪಟ್ಟದ ಅಧಿಕಾರ, ಅರಮನೆಯ ಆಸ್ತಿ ತನಗೆ ದಕ್ಕದೇ ಹೋದಾಗ ಪುರುಷಾಧಿಕಾರವನ್ನು ತಿರಸ್ಕರಿಸುತ್ತ ಪತ್ತೇರಿಕೂಟ ಸಮುದಾಯದ ನಿರ್ಣಯವನ್ನು ಪ್ರತಿಭಟಿಸುತ್ತಾಳೆ. ಪತ್ತೇರಿಕೂಟದಲ್ಲಿ ತನ್ನನ್ನು ಅವಮಾನಿಸಲು ತುಳಿಯಲು ಪತಿಯೂ ಸಹಕಾರ ನೀಡಿದಾಗ ಗಂಡನಿಗೂ ಬರ (ವಿಚ್ಛೇದನ) ಹೇಳುತ್ತಾಳೆ. ಗಂಡಿನ ಅನ್ಯಾಯವನ್ನು ಪ್ರತಿಭಟಿಸುವ ಸ್ಪಷ್ಟತೆ, ದೃಢತೆ, ಧೈರ್ಯವನ್ನು ತೋರುತ್ತಾಳೆ.
ಕತ್ತಿನ ಕರಿಮಣಿ, ಮೂಗಿನ ಮೂಗುತಿ ಕಿತ್ತು ಅರಮನೆಯ ಕಂಬಕ್ಕೆ ಕಟ್ಟುತ್ತಾಳೆ. ಕೈ ಬಳೆಗಳನ್ನು ಒಡೆದು ಒಗೆಯುತ್ತಾಳೆ. ನಿಮ್ಮ ಹೆಗಲಿಗೆ ನೊಗ ಇರಿಸಿ ಕೊರಳಿಗೆ ನೇಗಿಲು ಕಟ್ಟಿ ಯಾವಾಗ ನನ್ನ ಕಾಲ ಬುಡಕ್ಕೆ ಬರುತ್ತೀರೋ, ಯಾವಾಗ ನಿಮಗೆ ಎರಡು ಎತ್ತಿಗೂ ಒಂದು ಕಳಸೆ ಬಿತ್ತಿಗೂ ಕೊರತೆ ಬರುತ್ತದೆಯೋ ಅಂದಿಗೆ ನಾನು ನೀವು ಜತೆಯಾಗೋಣ ಅಲ್ಲಿಯವರೆಗೆ ನಿಮಗೆ ಬರ ಹೇಳುತ್ತೇನೆ ಎಂದು ನುಡಿದು ಹೊರಟು ಹೋಗುತ್ತಾಳೆ. ಸಿರಿ ಹೆಣ್ಣಿನ ಶೋಷಣೆ ಅನ್ಯಾಯಗಳಿಗೆ ಕಾರಣವಾಗುವ ಪುರುಷ ಪ್ರಧಾನ ಸಮಾಜದ ಮೌಲ್ಯಗಳನ್ನು ನಿರಾಕರಿಸಿ ಮಾತೃಪ್ರಧಾನ ಸಮಾಜದ ಬೆರಗಿಗೆ ಕಾರಣಳಾಗುತ್ತಾಳೆ. ಗಂಡಿನ ಪ್ರಭುತ್ವವನ್ನು ಪ್ರಶ್ನಿಸುವ, ಪ್ರತಿಭಟಿಸುವ ಧ್ವನಿಯನ್ನು ಪಡೆದುಕೊಂಡು ಸ್ತ್ರೀತ್ವದ ಸ್ವಾಯತ್ತ ಶಕ್ತಿಯ ಸಂಕೇತವಾಗುತ್ತಾಳೆ.
ಸಿರಿಯ ಬಾಳುವೆಯ ಉದ್ದಕ್ಕೂ ಹೆಜ್ಜೆ ಹೆಜ್ಜೆಗೂ ಸಂಘರ್ಷ, ವಿರೋಧಗಳು ಎದುರಾಗುತ್ತದೆ. ವ್ಯವಸ್ಥೆ ಆಕೆಯ ನಿರ್ಭಿಡೆಯ ನಡೆಯನ್ನು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ಅವಳನ್ನು ದಮನಿಸಲು ಪ್ರಯತ್ನಿಸಿದಾಗಲೆಲ್ಲ ಧೃಢವಾಗಿ ಪ್ರತಿಭಟಿಸುತ್ತಾಳೆ. ಪತಿಯನ್ನು ವಿರೋಧಿಸಿ, ಪತ್ತೇರಿಕೂಟವನ್ನು ಧಿಕ್ಕರಿಸಿದಳೆಂದು ರಾತ್ರಿ ಹಗಲಾಗುವುದರ ಒಳಗಾಗಿ ಊರು ಬಿಡಬೇಕಾದಾಗ ಕಡಪುವಿನ ಮಾನಿ ದೋಣಿ ನಡೆಸಲು ನಿರಾಕರಿಸಲು, ನದಿಯಲ್ಲೇ ದಾರಿ ಮಾಡಿಕೊಂಡು ಸಾಗಿದವಳು ಅವಳು ಕಾಡಿನ ದಾರಿಯಲ್ಲಿ ದಾರು, ಕುಮಾರನೊಂದಿಗೆ ಹೋಗುತ್ತಿದ್ದಾಗ ಸಿಕ್ಕ ಸಿರಿಯನ್ನು ಬಯಸಿದ ರಾಜಕುಮಾರರಿಗೆ ತನ್ನ ಹಿಂದಿರುವವ ಅಣ್ಣ, ಮುಂದಿರುವವ ತಮ್ಮನೆಂದು ತಿಳಿಸಿ ಹೇಳಿದವಳು, ಕೊಡ್ಪರಾಳ್ವನನ್ನು ಮರು ವಿವಾಹವಾದಾಗಲೂ ಆತನ ಮೊದಲ ಹೆಂಡತಿಗೆ ಅನ್ಯಾಯವಾಗದಂತೆ, ತನ್ನ ಸವತಿಯಿಂದಲೇ ಆದರ ಗೌರವ ಗಳಿಸಿಕೊಂಡವಳು. ತನ್ನ ಮಗ ಕುಮಾರ ಮತ್ತು ದಾರುವಿಗೂ ನೆಲೆಯೊಂದನ್ನು ಕೊಟ್ಟು ತನ್ನ ಸಾಂಸಾರಿಕ ಜೀವನ ನಡೆಸುತ್ತಾಳೆ. ಇವೆಲ್ಲವೂ ಸಿರಿ ಯದು ದಾರ್ಶನಿಕ ಸತ್ಯವಲ್ಲ ವಾಸ್ತವ ಸತ್ಯ ಎಂದವಳು ಅವಳು. ಆದ್ದರಿಂದಲೇ ಸತ್ಯದ ಮೌಲ್ಯವನ್ನು ಪ್ರತಿಪಾದಿಸಿ ಸತ್ಯನಾಪುರದ ಸಿರಿಯಾಗಿದ್ದಾಳೆ.
ತುಳುನಾಡಿನ ಉದ್ದಗಲಕ್ಕೂ ಇರುವ ಆದಿ ಆಲಡೆಗಳಲ್ಲಿ ಸಿರಿ ಜಾತ್ರೆ ನಡೆಯುತ್ತದೆ. ಸಿರಿ ಯ ಪಾರಮ್ಯವನ್ನು ಸಾರುವ ಪಾಡ್ದನವ ಹೇಳುತ್ತಲೇ ದಲ್ಯಕ್ಕೆ ನಿಲ್ಲುವ ಹೆಣ್ಣುಮಕ್ಕಳು ಮನದ ಭೂಮಿ ಮತ್ತು ಆಕಾಶಗಳನ್ನು ಜತೆ ಸೇರಿಸುವ ಮೂಲಕ ನೆಲದ ಸತ್ಯವನ್ನು ಪರಿಭಾವಿಸುತ್ತ ಸಾಗುತ್ತಾರೆ. ಸತ್ಯದ ಪರಿಭಾಷೆಗೆ ಮುಖಾಮುಖಿಗೊಳ್ಳುವ ಸಿರಿ ಯ ತಾಚರಣೆಯಿಂದ ಹೆಣ್ಣೆಂಬ ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳುವ ಪ್ರಜ್ಞೆಯೊಳಗಿದ್ದಾರೆ. ಅಲ್ಲಿ ಜಾತಿ- ಭೇದದ ಅಂತರವಿಲ್ಲದೆ ಎಲ್ಲರೂ ಸಮಾನ ದುಃಖಿಗಳು.
ಇಡೀ ಆರಾಧನಾ ಪರಂಪರೆಯಲ್ಲಿ ಸಿರಿಗಳಾಗಿ ದಲ್ಯಕ್ಕೆ ನಿಲ್ಲುವವರು ಪೂರ್ತಿಯಾಗಿ ಹೆಣೆಯದ ತೆಂಗಿನ ಸೋಗೆಯ ಮೇಲೆ ಬಿಳಿ ಬಟ್ಟೆ ಹಾಕಿ ಬರಿಗಾಲಲ್ಲಿ ನಿಲ್ಲುತ್ತಾರೆ. ಸ್ತ್ರೀತ್ವದ ಸಂಕೇತಗಳಾಗಿ ಕೈ ತುಂಬಾ ಬಳೆ, ತಲೆ ತುಂಬಾ ಮಲ್ಲಿಗೆ ಮತ್ತು ಹಿಂಗಾರದ ಹೂ ಮುಡಿದು ಬಿಳಿ ಸೀರೆಯುಟ್ಟು ಸೂತಕ, ಮೈಲಿಗೆಗಳಿಲ್ಲದೆ ಇದ್ದಾಗ ದಲ್ಯಕ್ಕೆ ನಿಲ್ಲುತ್ತಾರೆ. ವಂಶಪಾರಂಪರ್ಯವಾಗಿ ಇದ್ದ ಆಚರಣೆಗೆ ಅನುಗುಣವಾಗಿ ಈ ಆರಾಧನೆಯಲ್ಲಿ ಪಾತ್ರವಹಿಸುವವರು ವೈಯಕ್ತಿಕವಾಗಿ ತಮ್ಮ ಬದುಕಿನಲ್ಲಿಯೂ ಅನ್ಯಾಯಕ್ಕೆ ಒಳಗಾದವರಾಗಿರುತ್ತಾರೆ. ಸಿರಿ ಬಂಟ ಸಮುದಾಯದವಳಾದರೂ ಅವಳನ್ನು ಅವಾಹಿಸಿಕೊಳ್ಳುವವರು ಶೂದ್ರ ಪರಂಪರೆಯ ಎಲ್ಲ ಸ್ತ್ರೀಯರು. ಬ್ರಾಹ್ಮಣ ಸ್ತ್ರೀಯರು ಸಿರಿಗಳಾದ ಪ್ರಾತ್ಯಕ್ಷಿಕೆಗಳಿಲ್ಲದಿದ್ದರೂ ಬಹಳ ಹಿಂದಿನ ಕ್ಷೇತ್ರಕಾರ್‍ಯಗಳಲ್ಲಿ ಉಲ್ಲೇಖವಿದೆ. ಸಿರಿಯನ್ನು ಅವಾಹಿಸಿಕೊಂಡವರು ಲೌಕಿಕತೆಯಿಂದ ಅಲೌಕಿಕತೆಯೆಡೆಗೆ ಸಾಗುತ್ತಾ ಸಿರಿಯ ಪಾಡ್ದನವನ್ನು ಉತ್ತಮ ಪೌರುಷದಲ್ಲಿ ಹಾಡುತ್ತಾ ಕೈಯಲ್ಲಿರುವ ಹಿಂಗಾರವನ್ನು ಕೈಗೆ ಎದೆಗೆ ಸ್ಪರ್ಶಿಸುತ್ತ ಜೋಗದಿಂದ ಮಾಯಕ್ಕೆ ಸೇರುವ ಯತ್ನ ಮಾಡುತ್ತಾರೆ. ಆಕೆಯ ತುಮುಲ, ಆತಂಕ, ಹೋರಾಟಗಳಿಗೆಲ್ಲ ಅಪ್ಪೆರೆ ಎಂದು ಸಂಬೋಧಿಸುವ ನುಡಿಯುವ ಕುಮಾರ ಸಾಂತ್ವನವನ್ನು ಹೇಳುತ್ತ ಸಾಗುತ್ತಾನೆ. ಇದೇ ಒಂದು ಅದ್ಭುತ ಪ್ರತಿಮೆಯಾಗುತ್ತ ಸಿರಿಯ ಹೆಣ್ತನವನ್ನು ವೀರತನವನ್ನು ಪ್ರತಿಭಟನೆಯನ್ನು ಸಂಕೀರ್ಣತೆಯನ್ನು ಅರ್ಥೈಸಿಕೊಳ್ಳುತ್ತ ಸಾಗುತ್ತದೆ. ಕೆಲವು ಸಿರಿಗಳು ತೀರಾ ಆವೇಶಭರಿತರಾಗಿ ಕಾಣಿಸಿಕೊಂಡರೆ ಮತ್ತೆ ಕೆಲವರು ತೀರಾ ಮೌನವಾಗಿ ನಿಂತಲ್ಲಿಯೇ ದರ್ಶನ ಮಾಡುತ್ತಾ ತುಟಿ ಬಿಚ್ಚದೆ ಸುಮ್ಮನಿರುತ್ತಾರೆ. ಉಚ್ವಾಸ ನಿಚ್ವಾಸಗಳ ಸುಯ್‌ಗುಡುವಿಕೆಯಲ್ಲಿಯೇ ತಮ್ಮ ರೋಷ ಅಸಹನೆಗಳೊಂದಿಗೆ ಆವೇಶವನ್ನು ವ್ಯಕ್ತಪಡಿಸುತ್ತ ನಿರರ್ಗಳವಾಗಿ ಒಂದೇ ಮಹಿಳೆ ಪಾಡ್ದನವನ್ನು ಹೇಳುತ್ತಿದ್ದಾಗ ಮತ್ತೊಬ್ಬಳು ಅದನ್ನು ಮುಂದುವರಿಸುತ್ತಾಳೆ. ಇಬ್ಬರು, ಮೂವರು ಅಥವಾ ನಾಲ್ವರು ಪಾಡ್ದನವನ್ನು ಹೇಳುತ್ತ ಸಿರಿಯನ್ನು ಆವಾಹಿಸಿಕೊಳ್ಳುತ್ತ ದಲ್ಕಕ್ಕೆ ನಿಂತ ಎಲ್ಲರೂ ಕೊನೆಗೆ ಸೋ ಎನ್ನುವ ಉದ್ಗಾರದೊಂದಿಗೆ ಒಂದಾಗುವುದು, ಸ್ತ್ರೀಯರು ನಾವೆಲ್ಲ ಒಂದು ನಮ್ಮ ನೋವಿನ ಭಾವ ತಂತಿ ಎಲ್ಲ ಒಂದೇ ಎಂಬ ಸಮಷ್ಠಿ ಪ್ರಜ್ಞೆಯ ಭಾವ !
ಫಲವಂತಿಕೆಯ ಸಂಕೇತದ, ತಾಯ್ತನ, ಹೆಣ್ತನಗಳನ್ನು ಪಾರಂಪರಿಕ ನೆಲೆಯ ದೃಷ್ಟಿಕೋನದಿಂದ ನೋಡದೆ ಅದಕ್ಕಿಂತ ಭಿನ್ನವಾದ ಚಿಂತನಾಕ್ರಮವೊಂದು ಈ ಆರಾಧನಾ ಪರಂಪರೆಯಲ್ಲಿದೆ. ತುಳುನಾಡಿನ ಹೆಣ್ಣೊಬ್ಬಳಿಗೆ ದಕ್ಕುವ ಆಸ್ತಿಯ ಹಕ್ಕಿನ ಅಧಿಕಾರ, ಸಂಪತ್ತಿನ ಒಡೆತನ ಆಕೆಗೆ ಸ್ವಂತಿಕೆಯನ್ನು ನೀಡಿದರೂ, ತನಗಾದ ಅನ್ಯಾಯಗಳನ್ನು ಎದುರಿಸುವ ಸಾಮರ್ಥ್ಯ ತನ್ನ ಹೆಣ್ತನದ ರಕ್ಷಣೆಯ ಸಾದೃಶ ರೂಪಗಳು ಆಕೆಯ ಕತೆಯ ಉದ್ದಕ್ಕೂ ಮೂಲ ಎಳೆಯಾಗಿ ಸಾಗುತ್ತದೆ. ಈ ಎಲ್ಲ ಸೂಕ್ಷ್ಮಗಳನ್ನು ಅರ್ಥೈಸಿಕೊಂಡ ಸ್ತ್ರೀಯರು ಸಿರಿ ಜಾತ್ರೆಯಲ್ಲಿ ತಾವು ಭಾಗವಹಿಸುವ ಮೂಲಕ ಹೆಣ್ತನದ ಕಾಣ್ಕೆಯೊಂದನ್ನು ಕಂಡುಕೊಳ್ಳುತ್ತಾರೆ. ತನ್ನ ಭದ್ರತೆ ಮಾನ್ಯತೆಗಳನ್ನು ರಕ್ಷಿಸಿಕೊಳ್ಳುವ ಸ್ವಂತಿಕೆ ಹೆಣ್ಣಿಗೆ ತನ್ನಲ್ಲೇ ಇದೆ ಎಂಬ ವನಿತೆಯರ ಅಸ್ಮಿತೆಯ ದನಿಯಾಗಿ ಎಲ್ಲ ವರ್ಗ ಮತ್ತು ವರ್ಣದ ಸ್ತ್ರೀಯರು ಜಾತ್ರೆಯಲ್ಲಿ ಪಾಲು ಪಡೆಯುತ್ತಾರೆ.
------







