ಸುಳ್ಯ : ಹೊಸ ತಿರುವು ಪಡೆದುಕೊಂಡ ಮಗು ನಾಪತ್ತೆ ಪ್ರಕರಣ

- ದಫನ ಮಾಡಿದ ಮಗುವಿನ ಕಳೇಬರ ಹೊರತೆಗೆದು ಮಹಜರು
- ಅಸಹಜ ಸಾವಿನ ಕುರಿತು ತನಿಖೆ
ಸುಳ್ಯ: ಸುಳ್ಯದ ಕುರುಂಜಿಭಾಗ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬದ ನವಜಾತ ಶಿಶುವಿನ ಅಸಹಜ ಸಾವಿನ ಕುರಿತು ತನಿಖೆ ಆರಂಭವಾಗಿದ್ದು, ದಫನ ಮಾಡಿದ ಕಳೇಬರವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಕಾಸರಗೋಡು ಮೂಲಕ ಹರೀಶ ಎಂಬವರ ಪತ್ನಿ ಕುರುಂಜಿಭಾಗ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಯಮುನಾ ಡಿಸೆಂಬರ್ 30ರಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಜನವರಿ 16ರಂದು ಪೋಲಿಯೋ ಹನಿ ಹಾಕಿಸುವಂತೆ ತಿಳಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ತೆರಳಿದಾಗ ಅಲ್ಲಿ ಮಗು ಇಲ್ಲದಿರುವ ವಿಚಾರದ ಕುರಿತು ಪ್ರಶ್ನಿಸಿದ್ದು, ಮನೆಯವರು ಸಂಶಯಾತ್ಮಕವಾಗಿ ಉತ್ತರ ನೀಡಿದ್ದರು. ಮಗು ಮಾರಾಟ ಜಾಲ ಹೆಚ್ಚಿರುವುದರಿಂದ ಈ ಕುರಿತು ಅಂಗನವಾಡಿ ಸಿಬ್ಬಂದಿ ಸಿಡಿಪಿಒ ಅವರಿಗೆ ತಿಳಿಸಿದ್ದು, ಮಗು ನಾಪತ್ತೆ ಪ್ರಕರಣದ ಕುರಿತು ಶಂಕೆ ವ್ಯಕ್ತಪಡಿಸಿದ್ದರು. ಸಿಡಿಪಿಒ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರೀಶಿಲಿಸಿದಾಗ ಮಗು ಮೃತಪಟ್ಟಿದ್ದು, ಅದನ್ನು ದಫನ ಮಾಡಲಾಗಿದೆ ಎಂದು ಮನೆಯವರು ಧಪನ ಮಾಡಿದ ಸ್ಥಳವನ್ನು ತೋರಿಸಿದ್ದರು. ಧಪನ ಮಾಡಿದ ಶವವನ್ನು ಮತ್ತೆ ಹೊರತೆಗೆಯಲು ಸಹಾಯಕ ಕಮೀಷನರ್ ಅವರ ಅನುಮತಿ ಅಗತ್ಯವಿದ್ದು, ಪೊಲೀಸರು ಪುತ್ತೂರು ಸಹಾಯಕ ಕಮೀಶನರ್ ಅವರ ಅನುಮತಿ ಕೇಳಿದ್ದರು. ಅದರಂತೆ ಶುಕ್ರವಾರ ಎಸಿ ಡಾ.ರಾಜೇಂದ್ರ ಅವರ ಸಮಕ್ಷಮ ದಫನ ಮಾಡಿದ ಮಗುವಿನ ಕಳೇಬರವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವಿಧಿ ವಿಜ್ಞಾನ ತಜ್ಞರಾದ ಡಾ.ಶಾಹ್ ನವಾರ್ ಮಣಿಪ್ಪಾಡಿ, ಡಾ.ಸೂರಜ್ ಶೆಟ್ಟಿ, ಡಾ,ಮಹಾಬಲೇಶ್ ಶೆಟ್ಟಿ ಮತ್ತು ತಂಡದವರು ಮರಣೋತ್ತರ ಪರೀಕ್ಷೆ ನಡೆಸಿದರು. ತಹಶೀಲ್ದಾರ್ ಅನಂತ ಶಂಕರ, ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಸಿಡಿಪಿಒ ಸುಕನ್ಯ, ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯರ ತಂಡ, ಕೆವಿಜಿ ಆಯುವೇದಿಕ್ ಕಾಲೇಜಿನ ಆಡಳಿತಾಧಿಕಾರಿ ಡಾ.ಲೀಲಾಧರ್, . ಸುಳ್ಯ ನಗರ ಪಂಚಾಯತ್ ಉಪಾಧ್ಯಕ್ಷೆ ಡಿ.ಮೀನಾಕ್ಷಿ, ಸದಸ್ಯರಾದ ಶ್ರೀಲತಾ ಪ್ರಸನ್ನ, ಮೋಹಿನಿ ನಾಗರಾಜ್, ಕಿರಣ ಕುರುಂಜಿ ಮೊದಲಾದವರಿದ್ದರು.
ಸಾವಿನ ಸುತ್ತ ಅನುಮಾನದ ಹುತ್ತ
ಕುರುಂಜಿಭಾಗ್‌ನ ನವಜಾತ ಶಿಶು ನಾಪತ್ತೆ ಪ್ರಕರಣ ಇದೀಗ ಹೊಸದೊಂದು ತಿರುವು ಪಡೆದಿದ್ದು, ಆರೋಗ್ಯವಾಗಿದ್ದ ಮಗು ಅಸಜವಾಗಿ ಮೃತಪಟ್ಟಿರುವ ಬಗ್ಗೆ ವ್ಯಾಪಕ ಶಂಕೆಗಳು ವ್ಯಕ್ತವಾಗಿವೆ. ಯಮುನಾ ಮೂಕಿಯಾಗಿದ್ದು, ಆಕೆಯ ಗಂಡ ಹರೀಶ ಕಾಸರಗೋಡಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರು ಮನೆಗೆ ಬಾರದೇ ವರ್ಷವಾಗಿದೆ ಎಂದು ಅವರ ಮಗ 4ನೇ ತರಗತಿಯ ರಾಜೇಶ ಹೇಳಿದ್ದಾನೆ. ಇನ್ನು ಯಮುನಾ ಗರ್ಭಿಣಿಯಾಗಿದ್ದು 8 ತಿಂಗಳಾದರೂ ಆಕೆ ವೈದ್ಯರನ್ನು ಭೇಟಿ ಮಾಡಿರಲಿಲ್ಲ. ತಾನು ಗರ್ಭಿಣಿ ಎಂದು ಆಕೆಗೂ ಗೊತ್ತಿರಲಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಆಕೆಯನ್ನು ಪರೀಕ್ಷಿಸಿ ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿ ಡಿಸೆಂಬರ್ 30ರಂದು ಹೆರಿಗೆ ಆಗಿದೆ. ಈ ಕುರಿತು ಆಸ್ಪತ್ರೆಯಲ್ಲಿ ದಾಖಲೆಗಳಿವೆ. ಮೊದಲಿಗೆ ಮಗು ತನ್ನದಲ್ಲ, ತನ್ನ ಸಹೋದರಿಯದು ಎಂದು ಹೇಳುತ್ತಿದ್ದ ಯಮುನಾ ಬಳಿಕ ಮಗು ತನ್ನದೇ ಎಂದು ಹೇಳಿದ್ದು, ನೆರೆಕರೆಯವರಲ್ಲೂ ಸಂಶಯಕ್ಕೆ ಕಾರಣವಾಗಿತ್ತು. ಯಮುನಾ ಅವರು ಮೂಕಿಯಾಗಿದ್ದರಿಂದ ಅವರು ಕೈಸನ್ನೆ ಮೂಲಕ ನೀಡುವ ಹೇಳಿಕೆ ಮತ್ತು ಆಕೆಯ ಹಿರಿಯ ಮಗ ರಾಜೇಶ್ ನೀಡಿದ ಹೇಳಿಕೆಗಳೂ ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಅವರ ಮಗು ಅಸೌಖ್ಯದಿಂದ ಮೃತಪಟ್ಟಿದ್ದು, ತಾವು ಅದನ್ನ ದಫನ ಮಾಡಿರುವ ಸ್ಥಳವನ್ನು ತೋರಿಸಿದ್ದು, ಮಗು ಮಾರಾಟ ಆಗಿಲ್ಲ ಎಂಬದಕ್ಕೆ ಸಾಕ್ಷಿಯಾಗಿತ್ತು. ಆದರೆ ಈಗ ಮಗುವಿನ ಸಾವು ಸಹಜವೋ ಅಥವ ಅಸಜವೋ ಎಂಬ ಪ್ರಶ್ನೆ ಎದುರಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ರಿಪೋರ್ಟ್ ಬಂದ ಬಳಿಕ ಸ್ಪಷ್ಟಗೊಳ್ಳಲಿದೆ. ಪೊಲೀಸರು ಮನೆಯವರ, ನೆರೆ ಮನೆಯವರ ಹೇಳಿಕೆಗಳನ್ನು ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸ್ಥಳ ಮಹಜರಿನ ಮತ್ತು ಮುಂದಿನ ತನಿಖೆ ಬಗ್ಗೆ ಎಸಿ ಡಾ.ರಾಜೇಂದ್ರ ತಿಳಿಸಿದ್ದಾರೆ.







