ದಲಿತ ವಿದ್ಯಾರ್ಥಿಯ ಸಾವಿನ ಕುರಿತು ಚಕಾರವೆತ್ತದ ಪ್ರಧಾನಿಗೆ ಸಿಪಿಐ ತರಾಟೆ

ಹೊಸದಿಲ್ಲಿ,ಜ.22: ಪೇಷಾವರದಲ್ಲಿ ವಿದ್ಯಾರ್ಥಿಗಳ ಹತ್ಯೆಗಳ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರು ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಆತ್ಮಹತ್ಯೆಯ ಕುರಿತು ಚಕಾರವನ್ನೆತ್ತದ್ದಕ್ಕಾಗಿ ಸಿಪಿಐ ಶುಕ್ರವಾರ ಅವರನ್ನು ತೀವ್ರ ತರಾಟೆಗೆತ್ತಿಕೊಂಡಿತಲ್ಲದೆ, ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮತಿ ಇರಾನಿ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿತು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಅವರು, ವೇಮುಲ ಆತ್ಮಹತ್ಯೆ ಕುರಿತು ಮೋದಿಯವರು ವೌನವಾಗಿದ್ದಾರೆ. ಪೇಷಾವರದಲ್ಲಿ ಕೊಲ್ಲಲ್ಪಟ್ಟವರಿಗೆ ಅವರು ಸಂತಾಪಗಳನ್ನು ವ್ಯಕ್ತಪಡಿಸುತ್ತಾರೆ. ಅದರಲ್ಲೇನೂ ತಪ್ಪಿಲ್ಲ, ಆ ಘಟನೆಯು ಖಂಡನೆಗೆ ಅರ್ಹವಾಗಿದೆ. ಆದರೆ ಭಾರತದ ಪ್ರಧಾನಿಗಳು ಭಾರತದಲ್ಲಿ ನಡೆಯುವ ಘಟನೆಗಳ ಬಗ್ಗೆಯೂ ಮಾತನಾಡಬೇಕಾಗುತ್ತದೆ ಎಂದು ಹೇಳಿದರು.
ವೇಮುಲ ಆತ್ಮಹತ್ಯೆ ಘಟನೆಯ ಬಳಿಕ ಬಂಡಾರು ಮತ್ತು ಇರಾನಿಯವರ ಪಾತ್ರಗಳು ತೀರ ಪ್ರಶ್ನಾರ್ಹವಾಗಿರುವುದರಿಂದ ಅವರಿಬ್ಬರನ್ನೂ ಸಂಪುಟದಿಂದ ವಜಾಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಘಟನೆಗೆ ಕಾರಣಗಳನ್ನು ನೋಡುವುದಾದರೆ ಶಿಕ್ಷಣ ಕ್ಷೇತ್ರವು ವಿಚಾರಗಳು, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಮತ್ತು ಹಿಂದುತ್ವ ಸಿದ್ಧಾಂತದ ನಿಜವಾದ ರಣರಂಗವಾಗಿದೆ. ವಿವಿಗಳು ಮತ್ತು ಐಐಟಿಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯಾಧಾರಿತ ತಾರತಮ್ಯ ಮನೆಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಹಕ್ಕುಗಳನ್ನು ಸಾಧಿಸಲು ದಲಿತರು ಮುಂದಾದಾಗ ಅವರೆದುರು ಹಲವಾರು ಅಡೆತಡೆಗಳು ಸೃಷ್ಟಿಯಾಗುತ್ತವೆ ಎಂದರು.
ರಾಜಾ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ ರೆಡ್ಡಿ ಅವರೊಂದಿಗೆ ಗುರುವಾರ ಹೈದರಾಬಾದ್ ವಿವಿ ಕ್ಯಾಂಪಸ್‌ಗೆ ಭೇಟಿ ನೀಡಿದ್ದರು.







