ವಿಜ್ಞಾನ ಸಮಾವೇಶವಲ್ಲ ಭಾರತೀಯ ಕುರೂಪಿ ವಿಜ್ಞಾನ ವಿವಾಹ
ಮೈಸೂರು ವಿಶ್ವವಿದ್ಯಾನಿಲಯ ಪ್ರಾಯೋಜಿಸಿದ್ದ 103ನೆ ಭಾರತೀಯ ವಿಜ್ಞಾನ ಸಮಾವೇಶ (ಭಾವಿಸ) ಇತ್ತೀಚೆಗೆ ತಾನೆ ಮುಗಿಯಿತು. ಅದರಿಂದಾದ ಪರಿಣಾಮ ಮತ್ತು ಸಮಾಜದ ಮೇಲಾದ ಪ್ರಭಾವವನ್ನು ಎರಡು ಸಮಭಾಗಗಳಾಗಿ ಮಧ್ಯಕ್ಕೆ ಸೀಳುವುದಾದರೆ..., ಒಂದು ಭಾಗ ಯು.ಕೆ.ಯ ರಾಯಲ್ ಸೊಸೈಟಿಯ ಅಧ್ಯಕ್ಷ ಹಾಗೂ ರಸಾಯನ ವಿಜ್ಞಾನ ವಿಭಾಗದ ನೊಬೆಲ್ ಪುರಸ್ಕತರಾದ ವೆಂಕಟರಮಣ ರಾಮಕೃಷ್ಣನ್(ವೆಂಕಿ) ಬದಿಗಿದ್ದರೆ, ಇನ್ನೊಂದು ಬದಿ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಗಣಿತಜ್ಞ ಮಂಜುಲ್ ಭಾರ್ಗವರ ಬದಿಗಿವೆ.
ಇದರ ಇನ್ನೊಂದು ವಿಷಾದನೀಯ ಅಂಶವೆಂದರೆ, ವೆಂಕಿಯವರ ಮಾತುಗಳಿಗೆ ಪ್ರತಿಕ್ರಯಿಸುವ ಒಂದು ಸಣ್ಣ ಅವಕಾಶವನ್ನು ಹೊರತುಪಡಿಸಿದರೆ ವಿಜ್ಞಾನಿಗಳ ಬಗ್ಗೆಯಾಗಲಿ ಅಥವಾ ವಿದ್ಯಾರ್ಥಿಗಳ ಬಗ್ಗೆಯಾಗಲಿ ಅಲ್ಲಿ ಯಾರೂ ತಲೆಕೆಡಿಸಿಕೊಂಡೇ ಇರಲಿಲ್ಲ. ಇಲ್ಲಿ ಹುಸಿ ವಿಜ್ಞಾನದ ಬಗ್ಗೆ ಬಹಳಷ್ಟನ್ನು ಹೇಳಲಾಯಿತು ಮತ್ತು ಚರ್ಚಿಸಲಾಯಿತು, ಕಳೆದಬಾರಿ ಮುಂಬೈ ಸಮಾವೇಶದಲ್ಲಿ ನಡೆದಂತೆಯೇ!. ನಾನು ಅದನ್ನು ಪುನರಾವರ್ತಿಸಲು ಮತ್ತು ಚರ್ಚಿಸಲು ಹೋಗುವುದಿಲ್ಲ. ಆದರೆ ಅಲ್ಲಿ ರೊದ್ದಂ ನರಸಿಂಹನ್ ಮಂಡಿಸಿದ್ದ ಒಂದು ಅದ್ಬುತ ಮಾತುಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಅದರ ಮುಖ್ಯಾಂಶಗಳು ಹೀಗಿವೆ: ಇದು ವಿಜ್ಞಾನ ಮತ್ತು ಪುರಾಣಗಳನ್ನು (ತಮಾಷೆಗಾಗಿ ಯಾದರೂ ಸರಿ ಇವುಗಳನ್ನು ಮಿಶ್ರಮಾಡಿ ನೋಡದಿರುವುದು ಒಳ್ಳೆಯದು) ಪ್ರತ್ಯೇಕಿಸುವ, ಸಾಕ್ಷ್ಯಾಧಾರಿತ ಅಂಶಗಳ ಹೊರತು ವಿವೇಚನಾರಹಿತವಾಗಿ ಯಾವುದನ್ನೋ ಒಪ್ಪುವ ಯಾ ಊಹಿಸುವುದರ ಮತ್ತು ಮೂಢನಂಬಿಕೆ ಮತ್ತು ತರ್ಕಬದ್ಧತೆಯ ನಡುವಿನ ವ್ಯತ್ಯಾಸಗಳನ್ನು ಅರಿಯಲು ಸೂಕ್ತ ಸಮಯ (ಉದಾಹರಣೆಗೆ: ರಾಮಾನುಜನ್‌ರ ಜೀವನ ಪರ್ಯಂತ ನಾವು ಪೂರ್ಣ ತರ್ಕಬದ್ಧರಾಗಿಯೇ ಇರಬೇಕಾಗಿಲ್ಲ ಮಾತನ್ನು ಒಪ್ಪಿಕೊಂಡು). ಹೊರಗಿನ ಸ್ನೇಹಿತರೊಂದಿಗೆ ಕೂಡಿ ಇದನ್ನು ಸಾಧ್ಯಮಾಡಬೇಕಾಗಿರುವುದು ವಿಜ್ಞಾನಿಗಳ ಜವಾಬ್ದಾರಿಯಾಗಿದೆ. ನಮ್ಮ ಯುವಪೀಳಿಗೆಯೇನೋ ತನ್ನ ಹಿಂದಿನ ಸೂಕ್ಷ್ಮ ಜ್ಞಾನಧಾರೆಗಳನ್ನು ಕಲಿಯುವ ಹಸಿವನ್ನು ಹೊಂದಿದೆ, ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ವಿಜ್ಞಾನದ ಪಠ್ಯಗಳಿಂದ ಇತಿಹಾಸವನ್ನು ದೂರ ಮಾಡಿಬಿಟ್ಟಿದೆ ಮತ್ತು ಕುತೂಹಲಕಾರಿಯಾದ ದೇಶದ ಇತಿಹಾಸವನ್ನು ನಂಬಲರ್ಹವಾದ ಹಾಗೂ ಆಕರ್ಷಕ ರೀತಿಯಲ್ಲಿ ಹೇಳಿಕೊಡುವಲ್ಲಿ ಸಹ ನ್ಯೂನತೆಯನ್ನು ಹೊಂದಿದೆ.
ಹಾಗಾಗಿಯೇ, ಈ ಬಾರಿಯ ವಿಜ್ಞಾನ ಕಾಂಗ್ರೆಸ್‌ನಲ್ಲಿ ಪ್ರಥಮ ಬಾರಿಗೆ ಪಾಲ್ಗೊಂಡಿದ್ದ ಎಲ್ಲರೂ ಅನಿಯಂತ್ರಿತ ಭಾಷಣಕಾರರಾಗಿದ್ದರೇ?
ಅಗತ್ಯವನ್ನು ಕುರಿತು
ಖಂಡಿತವಾಗಿಯೂ ಇಂತಹ ಸಮಾವೇಶದ ಅಗತ್ಯವಿದೆ. ಆದರೆ ಇದು ಕೇವಲ ನಿಮ್ಮ ಇತ್ತೀಚಿನ ವಿಜ್ಞಾನದ ಸ್ವರೂಪವನ್ನು ಪ್ರದರ್ಶನಕ್ಕಿಡುವ ವೇದಿಕೆಯಾಗುವ ಬದಲು ಯುವ ಪೀಳಿಗೆ ಅದನ್ನು ವೃತ್ತಿ ಬದುಕಿನ ಮಾರ್ಗ ವನ್ನಾಗಿ ಆಯ್ದುಕೊಳ್ಳಲು ಪ್ರೇರೇಪಿಸುವಂತಿ ರಬೇಕು ಮತ್ತು ಹೇಗೆ ವಿಜ್ಞಾನಕ್ಕೆ ಮಾತ್ರ ಸಮಾಜದ ಸುಸ್ಥಿರ ಆರ್ಥಿಕ ಅಭಿವೃದ್ಧಿಯ ಮಾಧ್ಯಮವಾಗುವ ಸಾಧ್ಯತೆ ಇದೆ ಹಾಗೂ ಇದನ್ನು ಸಮಾಜಕ್ಕಾಗಿ ಸಾಧಿಸುವ ಅಗತ್ಯವಿದೆ ಎಂಬುದನ್ನು ಮನದಟ್ಟು ಮಾಡಿಸುವಂತಿರಬೇಕು. ಈ ಹಿನ್ನೆಲೆಯಲ್ಲಿ ನನಗೆ ಭಾರ್ಗವ ಆಡಿದ ಮಾತುಗಳೊಂದಿಗೆ ಭಿನ್ನಾಭಿಪ್ರಾಯವಿದೆ.
ಇಂಥ ವಿಜ್ಞಾನ ಸಮಾವೇಶದ ಅಗತ್ಯವೇನು? ನನಗನ್ನಿಸಿದಂತೆ, ವೈಯಕ್ತಿಕ ಸಂಶೋಧನೆಗಳ ಆಧುನೀಕರಣವನ್ನು ಹೇಳಿಕೊಳ್ಳುವುದಲ್ಲ! ಇದಕ್ಕಾಗಿ ನೀವು ವಿಶೇಷ ವಿಷಯಾಧಾರಿತ ಸಮಾವೇಶಗಳನ್ನು ಮಾಡಬಹುದು. ಇದರ ಉದ್ದೇಶ, ದೇಶದ ಉದ್ದಗಲದಲ್ಲಿರುವ ವಿಜ್ಞಾನಿಗಳನ್ನು ಒಂದೆಡೆ ತರುವುದು, ಅವರ ನಡುವೆ ಸಂಪರ್ಕವೇರ್ಪಡಿಸುವುದು, ಅವರೆಲ್ಲರ ನಡುವಿರುವ ಸಾಮಾನ್ಯ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿ ಅವುಗಳ ನಡುವೆ ಸಹಯೋಗವನ್ನು ರೂಪಿಸುವುದು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ವಿಜ್ಞಾನಿಗಳು ಮತ್ತು ಸಮಾಜದ ನಡುವೆ ಸಂಪರ್ಕ ಕಲ್ಪಿಸುವುದಾಗಿರಬೇಕು. ಇದು ಕೆಲವು ವಿಜ್ಞಾನಿಗಳ ಹೊಸ ಸಂಶೋಧನೆಯ ಫಲಿತಾಂಶಗಳನ್ನು ಮಂಡಿಸುವ ಅಥವಾ ಕೆಲವರು ತಮ್ಮ ಕ್ಷೇತ್ರ ಕಾರ್ಯದ ಮಹಿಮೆಗಳನ್ನು ಹೊಗಳಿಕೊಳ್ಳುವ ವೇದಿಕೆಯಾಗಬಾರದು. ಇಂಥ ಸಮಾವೇಶಗಳು ವಿಜ್ಞಾನದ ಪ್ರಭೆಯನ್ನು ಸಮಾಜದ ಉದ್ದಗಲಕ್ಕೆ ಪಸರಿಸುವ ವೇದಿಕೆಗಳಾಗಬೇಕು. ಈ ಮೂಲಕ ಯುವ ಮನಸ್ಸುಗಳನ್ನು ಆಕರ್ಷಿಸಿ, ದೇಶದ ವಿಜ್ಞಾನ ನೀತಿಯ ಬಗ್ಗೆ ಚರ್ಚೆಗೆ ಹಚ್ಚುವಂತಿರಬೇಕು. ಆದರೆ, ಏಕೆ ಸಮಾವೇಶದ ನಾಲ್ಕು ಗೋಷ್ಠಿ ಗಳಲ್ಲಿಯೂ ವಿಷಯಗಳು ಪುನರಾವರ್ತಿತವಾಗಿದ್ದವು? ಎಲ್ಲವನ್ನೂ ಒಳಗೊಂಡ ಒಂದು ಸಾರ್ವಜನಿಕ ಭಾಷಣದ ರೀತಿಯ ಒಂದೇ ಒಂದು ಗೋಷ್ಠಿಯಿರಲಿಲ್ಲ ಏಕೆ? ಒಬ್ಬನೇ ಒಬ್ಬ ವಿಜ್ಞಾನಿ ತನ್ನ ಸ್ವಂತ ಕ್ಷೇತ್ರದ ಸಾಧನೆ ಯಾ ಅಭಿವೃದ್ಧಿಗಳು ಜನಸಾಮಾನ್ಯನಿಗೆ ಉಪಯೋ ಗವಾಗುವಂತಹದ್ದನ್ನು ಸಾಧಿಸಿವೆ ಎಂದು ಹೇಳಲಿಲ್ಲ ಏಕೆ?
ಇಂತಹದ್ದೊಂದು ಅದ್ಭುತ ಪ್ರಯತ್ನ ಮಾಡಿದ್ದು ಮದ್ರಾಸ್ ಐಐಟಿಯ ಪ್ರಾಧ್ಯಾಪಕ ಟಿ. ಪ್ರದೀಪ್ ಮಾತ್ರ. ಇವರು ವಿಷಪೂರಿತ ಕಲುಷಿತ ನೀರಿನ ಶುದ್ಧೀಕರಣದಲ್ಲಿ ಅತಿಸೂಕ್ಷ್ಮಕಣಗಳ ಬಳಕೆಯನ್ನು ಅನ್ವಯಿಕ ವಿಧಾನದಲ್ಲಿ ವಿಶ್ಲೇಷಿಸುವ ಮೂಲಕ ವಾಸ್ತವತೆಗೆ ಹತ್ತಿರವಾದ ಪ್ರಯೋಗವೊಂದನ್ನು ಮಂಡಿಸಿದರು.
ಪರಿಣಾಮಕಾರಿತ್ವ
‘‘ಸಮಾವೇಶ ತನ್ನ ಉದ್ದೇಶಕ್ಕೆ ಸಣ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸಿದೆ’’ ಎಂಬ ವೆಂಕಿಯವರ ಮಾತುಗಳನ್ನು ನಾನು ಒಪ್ಪುತ್ತೇನೆ. ಹಾಗೆ ನೋಡಿದರೆ ಈ ಬಾರಿಯ ಸಮಾವೇಶ ಉಪಯುಕ್ತವೇ ಅಲ್ಲ. ಇದರಲ್ಲಿ ಮುಖ್ಯವಾಗಿ, ಅನೇಕ ಸಮಾವೇಶಗಳಲ್ಲಿ ಮಾಡಲಾಗುವಂತೆ ಭಾಷಣಕಾರರಿಗೆ; ವಿದ್ಯಾರ್ಥಿಗಳು, ಯುವ ವಿಜ್ಞಾನಿಗಳು ಮತ್ತಿತರ ಆಸಕ್ತ ಅಭ್ಯರ್ಥಿಗಳಿಂದ ಪ್ರತ್ಯೇಕವಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ನನ್ನಂತಹ ಭಾಷಣಕಾರರಿಗೆ ಈ ಊಟ, ತಿಂಡಿಯ ಬಿಡುವಿನ ಅವಧಿಯಲ್ಲಿ ಯುವ ಮನಸ್ಸುಗಳೊಂದಿಗೆ ಬೆರೆಯುವ ಆಸಕ್ತಿ ಇತ್ತು. ನಿಜವಾದ ವಿಚಾರ ವಿನಿಮಯಕ್ಕೆ ಇದು ಒಳ್ಳೆಯ ಸಮಯ ಸಹ ಆಗಿರುತ್ತದೆಯಲ್ಲವೇ? ಈ ಸಮಾವೇಶ ಈ ದೇಶದ ಯುವ ಮನಸ್ಸುಗಳಿಗೆ ತೆರೆದುಕೊಳ್ಳುವ ವೇದಿಕೆಯನ್ನೇ ಒದಗಿಸಲಿಲ್ಲ. ಈ ಮೂಲಕ ಯುವ ಪೀಳಿಗೆ ವಿಜ್ಞಾನದ ಬಗ್ಗೆ ಹೇಗೆ ಯೋಚಿಸುತ್ತದೆ ಎಂದಾಗಲಿ, ಈ ಮೂಲಕ ತಮ್ಮ ಭವಿಷ್ಯವನ್ನು ಹೇಗೆ ರೂಪಿಸಿ ಕೊಳ್ಳಬಯಸುತ್ತದೆ ಎಂದಾಗಲಿ, ವಿಜ್ಞಾನವನ್ನು ಅದರ ನಿಜವಾದ ಸ್ಫೂರ್ತಿಯೊಂದಿಗೆ ಜನಸಾಮಾನ್ಯರ ಮುಂದೆ ತಗೆದುಕೊಂಡು ಹೋಗುವಲ್ಲಿ ಅದು ಹೇಗೆ ಚಿಂತಿಸುತ್ತದೆ ಎಂಬುದನ್ನಾಗಲಿ ತಿಳಿಯಲು ಅವಕಾಶವಾಗಲಿಲ್ಲ.
ಮೊದಲನೆಯದಾಗಿ, ಈ ಹಿಂದೆ ನಡೆದ ಅನೇಕ ಸಮಾವೇಶಗಳಲ್ಲಿ ಈ ಸಮಾವೇಶ ಕೇವಲ ಶಿಷ್ಟಾಚಾರ ಪಾಲನೆಗೆ ಸೀಮಿತಿಗೊಂಡಿತ್ತು. ಎರಡನೆಯದಾಗಿ, ಅಲ್ಲಿಗೆ ಬಂದಿದ್ದವರಿಗೆ ವಿತರಿಸಲಾಗಿದ್ದ ಬ್ಯಾಡ್ಜ್‌ಗಳಲ್ಲಿ ಇದರ ಶಿಷ್ಟಾಚಾರ ಎದ್ದು ಕಾಣುತ್ತಿತ್ತು, ಅವುಗಳಲ್ಲಿ ವಿಶೇಷ ಆಹ್ವಾನಿತ, ಆಹ್ವಾನಿತ ಅತಿಥಿ, ವಿಐಪಿ, ವಿವಿಐಪಿ ಮತ್ತು ಡೆಮ್ಮಿ ಎಂದು ನಮೂದಿಸಲಾಗಿತ್ತು. (ತಮಾಷೆಗೆ ಹೇಳುತ್ತಿಲ್ಲ, ನಿಜವಾಗಿಯೂ ನನ್ನ ಎದುರಿಗಿದ್ದ ಅನೇಕರ ಬ್ಯಾಡ್ಜ್‌ಗಳಲ್ಲಿ ಅವರ ಹೆಸರಿನ ಮುಂದೆ ಡೆಮ್ಮಿ ಎಂದು ನಮೂದಿಸಲಾಗಿತ್ತು). ಇವರು ಏಕೆ ಹಾಗೆ ವಿಐಪಿ, ವಿವಿಐಪಿ ಎಂದು ನಮೂದಿಸಿದ್ದರು? ಬಹುಶಃ ಅಲ್ಲಿದ್ದ ನೊಬೆಲ್ ಪುರಸ್ಕೃತರು ಮತ್ತು ಫೀಲ್ಡ್ ಮೆಡಲ್ ಪುರಸ್ಕೃತರ ಹೆಸರುಗಳ ಮುಂದೆ ಅವನ್ನು ನಮೂದಿಸಿದ್ದರೆ ಅದೇನು ರಂಜನೆಯಾಗುತ್ತಿರಲಿಲ್ಲ? ಒಂದು ಸಮಾಜವಾಗಿ ನಮಗೆ ಪ್ರಶಸ್ತಿ- ಪುರಸ್ಕಾರಗಳ ಬಗ್ಗೆ ವ್ಯಾಮೋಹವಿರುತ್ತದೆ, ನಿಜ. ಆದರೆ, ಇಲ್ಲಿ ವೆಂಕಿ, ಗುರ್ಡಾನ್ ಮತ್ತು ಭಾರ್ಗವರ ಒಳ್ಳೆಯ ಕೆಲಸಗಳು ಪ್ರಶಂಸೆಗೆ ಒಳಗಾಗುವ ಬದಲು ಅವರೇಕೆ ಅವರ ಪ್ರಶಸ್ತಿಗಳ ಬಗ್ಗೆ ಡಂಗುರ ಹೊಡೆದುಕೊಂಡು ಓಡಾಡುತ್ತಿದ್ದಾರೋ ತಿಳಿಯದು. ಸಮಾವೇಶದ ಅಧಿಕಾರಿಗಳು ವಿಜ್ಞಾನದ ಬಗ್ಗೆಯಾಗಲಿ, ದೇಶದಲ್ಲಿ ಅದರ ಭವಿಷ್ಯದ ಬಗ್ಗೆಯಾಗಲಿ ಒಂದಿಷ್ಟೂ ತಲೆಕೆಡಿಸಿಕೊಂಡಿರಲಿಲ್ಲ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಸಮಾವೇಶದ ಅಧ್ಯಕ್ಷರು ಯುವ ಮನಸ್ಸುಗಳು, ಯುವ ವಿಜ್ಞಾನಿಗಳ ಜೊತೆಯಲ್ಲಿ ತೊಡಗಿಸಿಕೊಂಡು ಅವರನ್ನು ವಿಜ್ಞಾನದ ವಿಷಯದಲ್ಲಿ ತಲ್ಲೀನರಾಗುವಂತೆ ನೋಡಿಕೊಳ್ಳುವ ಬದಲಾಗಿ ಅವರ ಕೆಲವು ಗೆಳೆಯರಿಗೆ ಪ್ರಯಾಣ ಭತ್ತೆಯ ಚೆಕ್‌ಗಳನ್ನು ಕೊಡಿಸುವುದರಲ್ಲಿ ಸ್ಥಳೀಯ ಸಂಘಟಕರೊಂದಿಗೆ ಕೂಡಿ ಬ್ಯುಸಿಯಾಗಿಬಿಟ್ಟಿದ್ದರು (ಸ್ಥಳೀಯ ಕಾರ್ಯಕರ್ತರಂತೂ ಈ ವಿಐಪಿ, ವಿವಿಐಪಿ ಮತ್ತು ಡೆಮ್ಮಿಗಳ ಕರೆಗಳು ಮತ್ತು ಅಧ್ಯಕ್ಷರ ಸಿಡುಕಾಟಗಳ ನಡುವೆ ಹೈರಾಣಾಗಿ ಹೋಗಿದ್ದರು).
ಇಡೀ ಸಮಾವೇಶವೇ ಕೆಟ್ಟ ಭಾರತೀಯ ವಿವಾಹದಂತಿತ್ತು. ಅಸಂಖ್ಯಾತ ಜನ, ಆದರೆ ಒಬ್ಬರಿಗೊಬ್ಬರು ಗುರುತು ಹಚ್ಚಲಾಗದ ವರು ಇಲ್ಲ ತೀರಾ ಅಪರಿಚಿತರು. ತಿನ್ನುವವರು ದಿಕ್ಕಿಲ್ಲದಷ್ಟು ಆಹಾರ, ಕೆಲಸಕ್ಕೆ ಬಾರದ ಕೆಲಸ ಮಾಡಲು ಅಪಾರ ಅವಕಾಶ ವಿರುವಂಥದ್ದು (ಮದುವೆಗಳಲ್ಲಿ ಉಡುಗೊರೆ ಕೊಡಲು ಬಂದವರೊಂದಿಗೆ ವಧು-ವರರು ಹುಸಿನಗೆ ಬೀರುತ್ತಾರಲ್ಲಾ ಹಾಗೆ) ಅಪರಿಚಿತ ಮುಖಗಳನ್ನು ನೋಡಿ ಹುಸಿ ನಗೆ ನಗುತ್ತಾ ಸಾಗುವುದು. ಸಾರ್ವಜನಿಕ ಸಭೆಯ ನಂತರ ಅಕಾರಣವಾಗಿ ಮುತ್ತಿಕೊಳ್ಳುವ ಸಾರ್ವಜನಿಕರಂಥ ಕೆಲವು ವಿಜ್ಞಾನಿಗಳ ಹೊರತಾಗಿ ಅಲ್ಲಿ ಯುವ ಜನತೆಯ ಪಾಲ್ಗೊಳ್ಳುವಿಕೆಗೆ ಅವಕಾಶವೇ ಇರಲಿಲ್ಲ.
ಪರಿಣಾಮ
ರಾಷ್ಟ್ರೀಯ ವಿಜ್ಞಾನ ಸಮಾವೇಶ ನಮ್ಮ ಸಮಾಜದ ಮೇಲೆ ಯಾವ ಪರಿಣಾಮ ವನ್ನೂ ಬೀರಲಿಲ್ಲ. ಯಾವುದೇ ಒಂದು ಗೋಷ್ಠಿಯಲ್ಲಿಯೂ ಜನ ಸಮುದಾಯಕ್ಕೆ ಉಪಯುಕ್ತವಾಗುವಂತಹ ವಿಜ್ಞಾನ ಶಿಕ್ಷಣ, ಪ್ರಸಾರ, ನೀತಿಗಳ ಬಗ್ಗೆ ಒಂದೇ ಒಂದು ಅರ್ಥಪೂರ್ಣವಾದ ಚರ್ಚೆ ಯಾಗಲೀ, ವಿಚಾರ ವಿನಿಮಯಗಳಾಗಲಿ ನಡೆಯಲಿಲ್ಲ. ಏಕೆ ಇಡೀ ಸಮಾವೇಶದ ಒಂದು ದಿನವನ್ನು ಇದಕ್ಕೆ ಮೀಸಲಿಡಬಾರದಿತ್ತು? ಈ ಚರ್ಚೆಗಳ ಮೂಲಕ ನಿರ್ಮಾಣವಾಗುತ್ತಿದ್ದ ಅಂಶಗಳ ಮೂಲಕ ಸತ್ವಪೂರ್ಣವಾದ ನೀತಿಪತ್ರವೊಂದನ್ನು ಸಿದ್ಧ್ದಪಡಿಸಿ, ಅನುಷ್ಠಾನಕ್ಕಾಗಿ ಸರಕಾರದ ಮುಂದೆ ಮಂಡಿಸಬಹುದಿತ್ತು. ಜೊತೆಗೆ, ವಿಜ್ಞಾನದ ಯಶಸ್ಸಿನ ಮಾನದಂಡಗಳ ನಿರ್ಧಾರದ ಬಗ್ಗೆ ಈ ಸಮಾವೇಶ ಏಕೆ ಚರ್ಚಿಸಲಿಲ್ಲ? ಈ ಹಿಂದಿನ ಸಮಾವೇಶಗಳಲ್ಲಿ ಅನೇಕ ಭರವಸೆ ಗಳನ್ನು ನೀಡಲಾಗಿತ್ತು, ಅವುಗಳಲ್ಲಿ ಕೆಲವನ್ನಾದರೂ ಚರ್ಚಿಸಿ, ಕನಿಷ್ಠ ಒಂದನ್ನಾದರೂ ಸಾಕಾರಗೊಳಿಸಬಹುದಿತ್ತು.
ವಿಜ್ಞಾನ ಕೇವಲ ವಿಜ್ಞಾನಿಗಳಿಗೆ ಮಾತ್ರ ಅಲ್ಲ. ಇದರಲ್ಲಿ ಹೆಚ್ಚೆಚ್ಚು ಪ್ರಮಾಣದ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಗತ್ಯವಿದೆ. ಈ ವಿಜ್ಞಾನ ಸಮಾವೇಶ ನಮ್ಮ ಸಮಾಜದ ಮೇಲೆ ಪ್ರಭಾವ ಬೀರುವಂತಿರಬೇಕು. ಈ ಮೂಲಕ ವಿಜ್ಞಾನದ ಬಗ್ಗೆ ಆಸಕ್ತಿಯುಳ್ಳ ಸಮಾಜದ ಮೇಲೆ ಪ್ರಭಾವ ಬೀರಬಲ್ಲ ಹೆಚ್ಚೆಚ್ಚು ಯುವ ಮನಸ್ಸುಗಳನ್ನು ಒಳಗೊಳ್ಳಬೇಕು. ಈ ಎಲ್ಲಾ ಲೆಕ್ಕಾಚಾರಗಳಲ್ಲಿಯೂ ಈ ಬಾರಿಯ ವಿಜ್ಞಾನ ಸಮಾವೇಶ ದಯನೀಯವಾಗಿ ಸೋತಿದೆ. ಇದು ವಿಜ್ಞಾನ ಸಮಾವೇಶ ಅಲ್ಲವೇ ಅಲ್ಲ, ಇದೊಂದು ಭಾರತೀಯ ಕುರೂಪಿ ವಿವಾಹ ಸಮಾರಂಭ ಮಾತ್ರವಾಗಿತ್ತು.