ಟರ್ಕಿಯಿಂದ ಗ್ರೀಸ್‌ಗೆ ಹೋಗುತ್ತಿದ್ದ ದೋಣಿಗಳ ಮುಳುಗಡೆ: 44 ವಲಸಿಗರ ಜಲ ಸಮಾಧಿ
ಅಥೆನ್ಸ್ (ಗ್ರೀಸ್), ಜ. 22: ಗ್ರೀಸ್‌ನ ದ್ವೀಪಗಳಾದ ಫಾರ್ಮಕೊನಿಸಿ ಮತ್ತು ಕಲೋಲಿಮ್ನಾಸ್‌ಗೆ ವಲಸಿಗರನ್ನು ಸಾಗಿಸುತ್ತಿದ್ದ ಎರಡು ದೋಣಿಗಳು ಶುಕ್ರವಾರ ಮುಂಜಾನೆ ಸಮುದ್ರದಲ್ಲಿ ಮುಳುಗಿದ್ದು, 20 ಮಕ್ಕಳು ಸೇರಿದಂತೆ ಕನಿಷ್ಠ 44 ಮಂದಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಗ್ರೀಸ್‌ನ ತಟರಕ್ಷಣಾ ಪಡೆ ಹೇಳಿದೆ.
74 ಮಂದಿಯನ್ನು ರಕ್ಷಿಸಿರುವುದಾಗಿ ಅದು ತಿಳಿಸಿದೆ. 17 ಮಕ್ಕಳು, 17 ಮಹಿಳೆಯರು ಮತ್ತು 10 ಪುರುಷರ ಮೃತದೇಹಗಳನ್ನು ಅದು ಮೇಲೆತ್ತಿದೆ. ಟರ್ಕಿಯಿಂದ ನಿರಾಶ್ರಿತರನ್ನು ಹೊತ್ತು ಏಜಿಯನ್ ಸಮುದ್ರದ ಮೂಲಕ ಗ್ರೀಸ್‌ನ ಫಾರ್ಮಕೊನಿಸಿ ದ್ವೀಪಕ್ಕೆ ಸಾಗುತ್ತಿದ್ದ ಮೊದಲ ದೋಣಿ ಸ್ಥಳೀಯ ಸಮಯ ಮುಂಜಾನೆ ಸುಮಾರು 2.30ಕ್ಕೆ ಬಂಡೆಗಳಿಗೆ ಬಡಿದು ಮುಳುಗಿತು. ಮುಳುಗಿದ ದೋಣಿಯಿಂದ 48 ಮಂದಿ ಫಾರ್ಮಕೊನಿಸಿ ದ್ವೀಪವನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ಗಂಟೆಗಳ ಬಳಿಕ, ಇನ್ನೊಂದು ದೋಣಿ ಕಲೋಲಿಮ್ನಾಸ್ ದ್ವೀಪದ ಬಳಿ ಮಗುಚಿತು.
ಈ ದೋಣಿಯಲ್ಲಿದ್ದವರ ಪೈಕಿ 26 ಮಂದಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿರುವವರಿಗಾಗಿ ತಟ ರಕ್ಷಣಾ ಪಡೆಯು ಹೆಲಿಕಾಪ್ಟರ್ ನೆರವಿನಿಂದ ಶೋಧ ನಡೆಸುತ್ತಿದೆ.
ದಡ ತಲುಪದವರು 113 ಮಂದಿ
ಮಧ್ಯ ಪ್ರಾಚ್ಯ ಮತ್ತು ಇತರೆಡೆಗಳಲ್ಲಿನ ಹಿಂಸಾಚಾರ ಮತ್ತು ದೌರ್ಜನ್ಯಕ್ಕೆ ಬೇಸತ್ತು ಅಲ್ಲಿನ ಜನರು ಯುರೋಪ್ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಅವರ ಪೈಕಿ ಹೆಚ್ಚಿನವರು ಸಿರಿಯದ ನಿರಾಶ್ರಿತರು. ಅವರು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಸಣ್ಣ ದೋಣಿಗಳಲ್ಲಿ ತಮ್ಮ ಅದೃಷ್ಟವನ್ನು ಅರಸುತ್ತಾ ಅಪಾಯಕಾರಿ ಪ್ರಯಾಣದ ಮೂಲಕ ಟರ್ಕಿಯಿಂದ ಗ್ರೀಸ್‌ಗೆ ಬರುತ್ತಿದ್ದಾರೆ.
ಜರ್ಮನಿ, ಸ್ವೀಡನ್ ಮತ್ತು ಐರೋಪ್ಯ ಒಕ್ಕೂಟದ ಇತರ ದೇಶಗಳಲ್ಲಿ ಹೊಸ ಬದುಕನ್ನು ಆರಂಭಿಸುವ ನಿರೀಕ್ಷೆಯನ್ನು ಹೊತ್ತು ಈ ವರ್ಷ ಈವರೆಗೆ ಸುಮಾರು 37,000 ವಲಸಿಗರು ಸಮುದ್ರ ಮೂಲಕ ಗ್ರೀಸ್ ತಲುಪಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗ ಸಂಘಟನೆ ಅಂದಾಜಿಸಿದೆ.
ಜನವರಿ 1ರಿಂದ 17ರವರೆಗಿನ ಅವಧಿಯಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ದಾಟುವ ಪ್ರಯತ್ನದಲ್ಲಿ 113 ಮಂದಿ ಸಮುದ್ರದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.







