ತೈವಾನ್ ವಿರುದ್ಧ ಸೇನಾ ಕಾರ್ಯಾಚರಣೆಗೆ ಚೀನಾ ಸಜ್ಜು?
ಬೀಜಿಂಗ್, ಜ. 22: ಚೀನಾದಲ್ಲಿ ನಡೆಯುತ್ತಿರುವ ಬೃಹತ್ ಸೇನಾ ಅಭ್ಯಾಸ ಮತ್ತು ವಿಮಾನ ಭೂಸ್ಪರ್ಶ ತಾಲೀಮುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಬೇಡಿ ಎಂದು ದೇಶದ ರಕ್ಷಣಾ ಸಚಿವಾಲಯ ಶುಕ್ರವಾರ ಜನರಿಗೆ ಸೂಚಿಸಿದೆ.
ತೈವಾನ್‌ನಲ್ಲಿ ಸ್ವಾತಂತ್ರ ಪರ ಒಲವುಳ್ಳ ಪ್ರತಿಪಕ್ಷವೊಂದು ಭಾರೀ ಬಹುಮತದ ಚುನಾವಣಾ ಗೆಲುವು ಸಾಧಿಸಿರುವ ದಿನಗಳ ಬಳಿಕ ಚೀನಾದ ಸಮರಾಭ್ಯಾಸ ನಡೆಯುತ್ತಿರುವುದನ್ನು ಸ್ಮರಿಸಬಹುದಾಗಿದೆ. ಈ ಅಭ್ಯಾಸಗಳನ್ನು ಚೀನಾದ ಸರಕಾರಿ ಮಾಧ್ಯಮಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ.
ಚೀನಾದ ಮಾಧ್ಯಮಗಳಲ್ಲಿ ನೇರ ಪ್ರಸಾರಗೊಳ್ಳುತ್ತಿರುವ ಸೇನಾ ಕಸರತ್ತುಗಳ ಬಗ್ಗೆ ಸ್ವಯಂ ಆಡಳಿತದ ದ್ವೀಪ ತೈವಾನ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
ಚೀನಾ ಇತ್ತೀಚೆಗೆ ‘ಚಳಿಗಾಲದ ಕಸರತ್ತು’ಗಳನ್ನು ನಡೆಸಿರುವುದನ್ನು ಅದರ ರಕ್ಷಣಾ ಸಚಿವಾಲಯ ಖಚಿತಪಡಿಸಿದೆ. ಆದರೆ, ತೋರಿಸಲಾದ ಚಿತ್ರಗಳು 2015ರಲ್ಲಿ ನಡೆದ ಅಭ್ಯಾಸದ ಸಂಗ್ರಹ ಚಿತ್ರಗಳು ಎಂದು ಅದು ಹೇಳಿಕೊಂಡಿದೆ.
ತೈವಾನ್ ಒಂದು ‘ದಾರಿತಪ್ಪಿದ’ ರಾಜ್ಯ ಎಂದು ಚೀನಾ ಪರಿಗಣಿಸುತ್ತಿದೆ ಹಾಗೂ ಅಗತ್ಯ ಬಿದ್ದರೆ ಬಲ ಪ್ರಯೋಗಿಸಿ ಅದನ್ನು ತನ್ನ ತೆಕ್ಕೆಗೆ ತರಬಹುದಾಗಿದೆ ಎಂದು ಅದು ಹೇಳುತ್ತಿದೆ. ಚೀನಾದ ಆಂತರಿಕ ಯುದ್ಧದ ಬಳಿಕ, 1949ರಲ್ಲಿ ಸೋಲುಂಡ ರಾಷ್ಟ್ರೀಯವಾದಿ ಶಕ್ತಿಗಳು ತೈವಾನ್‌ಗೆ ಪಲಾಯನಗೈದಿದ್ದವು.
‘‘ಈಗ ಪ್ರಸಾರಗೊಳ್ಳುತ್ತಿರುವ ಮಾಧ್ಯಮ ವರದಿಗಳು, ಸೇನೆ ಕಳೆದ ವರ್ಷ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಚಿತ್ರಗಳಾಗಿವೆ. ಅವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’’ ಎಂದು ಸುದ್ದಿಸಂಸ್ಥೆಯೊಂದಕ್ಕೆ ಕಳುಹಿಸಿದ ಎರಡು ವಾಕ್ಯಗಳ ಹೇಳಿಕೆಯಲ್ಲಿ ಚೀನಾದ ರಕ್ಷಣಾ ಸಚಿವಾಲಯ ಹೇಳಿದೆ.ತೈವಾನ್‌ಗೆ ಹೊಂದಿಕೊಂಡಿರುವ ಕ್ಸಿಯಾಮೆನ್ ನಗರದಲ್ಲಿರುವ ಸೇನೆಯ 31ನೆ ತುಕಡಿ ‘ಇತ್ತೀಚಿನ ದಿನಗಳಲ್ಲಿ’ ಯುದ್ಧಾಭ್ಯಾಸ ನಡೆಸಿದೆ ಎಂದು ಬುಧವಾರ ರಾತ್ರಿ ಚೀನಾದ ಸರಕಾರಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ವರದಿಯು ಯುದ್ಧಾಭ್ಯಾಸ ನಡೆಯುತ್ತಿರುವ ಸ್ಥಳದ ನಿಖರ ವಿವರಗಳನ್ನು ನೀಡಿಲ್ಲ.





