ಪ್ರಧಾನಿಗೆ ಮಲ್ಲಿಕಾ ಸಾರಾಭಾಯಿ ತರಾಟೆ
ಅಹ್ಮದಾಬಾದ್,ಜ.22: ತನ್ನ ತಾಯಿ ಮೃಣಾಲಿನಿಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶುಕ್ರವಾರ ಕಟುವಾಗಿ ಟೀಕಿಸಿರುವ ನೃತ್ಯ ಕಲಾವಿದೆ ಮಲ್ಲಿಕಾ ಸಾರಾಭಾಯಿ ಅವರು, ಇದು ಅವರ ‘ದ್ವೇಷ ಮನೋಭಾವ’ವನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.
‘‘ಪ್ರಿಯ ಪ್ರಧಾನ ಮಂತ್ರಿಗಳೇ,ನೀವು ನನ್ನ ರಾಜಕಾರಣವನ್ನು ದ್ವೇಷಿಸುತ್ತೀರಿ ಮತ್ತು ನಾನು ನಿಮ್ಮ ರಾಜಕಾರಣವನ್ನು ದ್ವೇಷಿಸುತ್ತೇನೆ. ಇದಕ್ಕೂ ಮತ್ತು ನಿಮ್ಮ ಗುಜರಾತಿನವರೇ ಆದ ಮೃಣಾಲಿನಿ ಸಾರಾಭಾಯಿ ಅವರು 60 ವರ್ಷಗಳ ಕಾಲ ಈ ದೇಶದ ಸಂಸ್ಕೃತಿಯನ್ನು ವಿಶ್ವಾದ್ಯಂತ ಬಿಂಬಿಸಲು ಪಟ್ಟ ಶ್ರಮಕ್ಕೂ ಯಾವುದೇ ಸಂಬಂಧವಿಲ್ಲ’’ ಎಂದು ಮಲ್ಲಿಕಾ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
ನೃತ್ಯ ಕಲಾವಿದೆ-ಸಾಮಾಜಿಕ ಕಾರ್ಯಕರ್ತೆ ಮಲ್ಲಿಕಾ 2009ರ ಲೋಕಸಭಾ ಚುನಾವಣೆಯಲ್ಲಿ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿಯವರ ವಿರುದ್ಧ ಗಾಂಧಿನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೋಲನ್ನನುಭವಿಸಿದ್ದರು.
‘‘ನೀವು ನನ್ನನ್ನು ಎಷ್ಟೇ ದ್ವೇಷಿಸಿರಿ... ಆದರೆ ನಮ್ಮ ಪ್ರಧಾನಿಯಾಗಿ ನನ್ನ ತಾಯಿಯ ಕೊಡುಗೆಯನ್ನು ನೀವು ಗೌರವಿಸುವುದು ನಿಮ್ಮ ಹುದ್ದೆಗೆ ಶೋಭಿಸುತ್ತಿತ್ತು. ಆದರೆ ನೀವು ಅದನ್ನು ಮಾಡಲಿಲ್ಲ. ನಿಮಗೆ ನಾಚಿಕೆಯಾಗಬೇಕು’’ಎಂದು ಮಲ್ಲಿಕಾ ಕುಟುಕಿದ್ದಾರೆ.
ಹಿರಿಯ ನೃತ್ಯ ಕಲಾವಿದೆ ಹಾಗೂ ಪದ್ಮ ಪ್ರಶಸ್ತಿ ಪುರಸೃತೆ ಮೃಣಾಲಿನಿ ಸಾರಾಭಾಯಿ(97) ಅವರು ಬುಧವಾರ ಇಲ್ಲಿ ನಿಧನರಾಗಿದ್ದರು.
ಮೋದಿಯವರು 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾದಾಗಿನಿಂದಲೂ ಅವರ ಕಟು ಟೀಕಾಕಾರರಾಗಿರುವ ಮಲ್ಲಿಕಾ 2002ರ ದಂಗೆಗಳಿಗೆ ಸಂಬಂಧಿಸಿದಂತೆ ಮೋದಿ ನೇತೃತ್ವದ ಸರಕಾರದ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರಲ್ಲದೆ, ಪ್ರತಿಭಟನೆಗಳ ಸಂಘಟಿಸಿದ್ದರು.







